ಭಾರತ, ಅಮೆರಿಕ ಮಾತುಕತೆ
ವಾಶಿಂಗ್ಟನ್, ಎ. 30: ದ್ವಿಪಕ್ಷೀಯ ನಾಗರಿಕ ಪರಮಾಣು ಸಹಕಾರವನ್ನು ಮುಂದಕ್ಕೆ ಒಯ್ಯಲು ಹಾಗೂ ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯನ್ನು ವೃದ್ಧಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಭಾರತ ಮತ್ತು ಅಮೆರಿಕಗಳು ಚರ್ಚಿಸಿವೆ ಎಂದು ವಿದೇಶ ಇಲಾಖೆಯ ವಕ್ತಾರರೋರ್ವರು ತಿಳಿಸಿದರು.
ವಿದೇಶ ಕಾರ್ಯದರ್ಶಿ ಎಸ್. ಜೈಶಂಕರ್ ವಾಶಿಂಗ್ಟನ್‌ನಲ್ಲಿ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ರನ್ನು ಭೇಟಿಯಾದ ಒಂದು ದಿನದ ಬಳಿಕ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.
ಬ್ಲಿಂಕನ್‌ರನ್ನು ಭೇಟಿಯಾದ ವೇಳೆ ಜೈಶಂಕರ್ ಹಲವಾರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜೂನ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡಬಹುದು ಎಂಬ ಊಹಾಪೋಹಗಳ ನಡುವೆ ಜೈಶಂಕರ್ ಅಮೆರಿಕ ಪ್ರವಾಸ ಕೈಗೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಹವಾಮಾನ ಬದಲಾವಣೆ ಸಮಸ್ಯೆಯನ್ನು ನಿಭಾಯಿಸಲು ನಡೆಯುತ್ತಿರುವ ಜಾಗತಿಕ ಯತ್ನಗಳಿಗೆ ಭಾರತ ನೀಡುತ್ತಿರುವ ದೇಣಿಗೆಗೆ ಅಮೆರಿಕದ ಉಪ ವಿದೇಶ ಕಾರ್ಯದರ್ಶಿ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವಕ್ತಾರರು ಶುಕ್ರವಾರ ತಿಳಿಸಿದರು.
ನೆರೆಯ ದೇಶಗಳೊಂದಿಗೆ ಪಾಕ್ ಮಾತುಕತೆ ನಡೆಸಲಿ: ಅಮೆರಿಕ
ತನ್ನ ನೆರೆಕರೆಯ ದೇಶಗಳೊಂದಿಗೆ ಇರುವ ವಿವಾದಗಳನ್ನು ಪರಿಹರಿಸಿಕೊಳ್ಳಲು ಅವುಗಳೊಂದಿಗೆ ಪಾಕಿಸ್ತಾನ ಮಾತುಕತೆ ನಡೆಸಬೇಕೆಂದು ಅಮೆರಿಕ ಬಯಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.
ಪಾಕಿಸ್ತಾನಕ್ಕೆ ಎಫ್-16 ವಿಮಾನಗಳನ್ನು ಮಾರಾಟ ಮಾಡುವ ಸಂಬಂಧ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ಶಸ್ತ್ರಾಸ್ತ್ರ ವರ್ಗಾವಣೆ ವ್ಯವಹಾರದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ‘‘ಇತರ ಹಲವಾರು ವಿಷಯ’’ಗಳನ್ನು ಅಮೆರಿಕ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.