×
Ad

ಕಾಸರಗೋಡು: ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಕ್ರಮ

Update: 2016-05-01 10:55 IST

ಕಾಸರಗೋಡು, ಮೇ 1 : ಜಿಲ್ಲೆಯಲ್ಲಿ ಬರ ತೀವ್ರಗೊಂಡ ಹಿನ್ನೆಲೆಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸೂಕ್ತ  ಕ್ರಮ ತೆಗೆದು ಕೊಳ್ಳಲು ಜಿಲ್ಲಾಡಳಿತ  ತೀರ್ಮಾನಿಸಿದೆ.

ತುರ್ತಾಗಿ ಟ್ಯಾಂಕರ್ ಗಳಲ್ಲಿ  ನೀರು ವಿತರಣೆ , ಜಲಮೂಲಗಳನ್ನು   ಪುನರ್ಜೀವಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಇ . ದೇವದಾಸ್ ತಿಳಿಸಿದ್ದಾರೆ .

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ  ಬರ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮ ಪಂಚಾಯತ್ ಗಳಿಗೆ ತಲಾ  ಹತ್ತು ಲಕ್ಷ ರೂ. ನಗರಸಭೆಗಳಿಗೆ ತಲಾ 15 ಲಕ್ಷ ರೂ . ನೀಡಲಾಗುವುದು. ಇದಕ್ಕಾಗಿ  ತಾಲೂಕು ಮಟ್ಟದಲ್ಲಿ  ಪಂಚಾಯತ್ ಕಾರ್ಯದರ್ಶಿ ಗಳ ಸಭೆ ಕರೆಯಲಾಗುವುದು.  ಖಾಸಗಿ  ವ್ಯಕ್ತಿಗಳ  ಬಾವಿಗಳಿಂದ ನೀರನ್ನು  ಪಡೆದು ಸರಬರಾಜು ಮಾಡುವ ಬಗ್ಗೆ ತೀರ್ಮಾನಿಸಲಾಯಿತು.  ಎರಡು ದಿನಗಳಿಗೊಮ್ಮೆ   ಆಯಾ ಪ್ರದೇಶಕ್ಕೆ ಕುಡಿಯುವ  ನೀರು ಸರರಾಜು ಮಾಡಬೇಕು ಎಂದು ಆದೇಶಿಸಲಾಯಿತು.

ಸರಕಾರೇತರ  ಸಂಘಟನೆ, ಸಂಘ ಸಂಸ್ಥೆಗಳ ನೆರವು ಪಡೆಯಲಾಗುವುದು.  ಈ ಬಗ್ಗೆ ಶೀಘ್ರ ಸಭೆ ಕರೆಯಲಾಗುವುದು.  ಪ್ರಾಥಮಿಕ ಮಾಹಿತಿಯಂತೆ  ಇದುವರೆಗೆ ಜಿಲ್ಲೆಯಲ್ಲಿ 1,348  ಹೆಕ್ಟೇರ್  ಸ್ಥಳದ ಕೃಷಿ ಫಸಲು, 1.90 ಕೋಟಿ ರೂ. ಗಳ ಕೃಷಿ ನಾಶ ಉಂಟಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಮೂರು ಮಂದಿಗೆ ಸೂರ್ಯಾಘಾತ ಉಂಟಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ  ತಿಳಿಸಿದರು.

ಬೇಸಿಗೆ ಸಮಯದಲ್ಲಿ ಕಾರ್ಯಾಚರಿಸುತ್ತಿರುವ  ಶಾಲೆಗಳಿಗೆ ರಜೆ ನೀಡುವ ಬಗ್ಗೆ ಶಿಕ್ಷಣ ಉಪ ನಿರ್ದೇಶಕರಿಂದ ಜಿಲ್ಲಾಧಿಕಾರಿ ವರದಿ  ಕೋರಿದರು.
ಹೆಚ್ಚುವರಿ ದಂಡಾಧಿಕಾರಿ ವಿ . ಪಿ ಮುರಳೀಧರನ್ ,  ತಹಶಿಲ್ದಾರ್ ಗಳಾದ  ಕೆ .ಎಸ್ ಸುಜಾತಾ , ಕೆ . ಪರಮೇಶ್ವರ ,   ಸಜಿ ಮೆಂಡಿಸ್ ,  ಎಂ . ಸಿ ವಿಮಲ್ ರಾಜ್ ,  ಕೆ . ಪಿ.  ದಿನೇಶನ್ ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News