ತಾಕತ್ತಿದ್ದರೆ ಕೇಂದ್ರ ಸರಕಾರ ನನ್ನನ್ನು ಬಂಧಿಸಲಿ: ಎ.ಕೆ. ಆ್ಯಂಟನಿ
ಕಾಸರಗೋಡು, ಮೇ.1: ಅಗಸ್ಟಾ ವೆಸ್ಟ್‌ಲಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ಅವ್ಯವಹಾರದ ಬಗ್ಗೆ ಆರೋಪ ಹೊರಿಸುತ್ತಿರುವ ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಜೈಲಿಗಟ್ಟಿ ಎಂದು ಕೇಂದ್ರದ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಸವಾಲು ಹಾಕಿದ್ದಾರೆ.
ಕಾಸರಗೋಡು ಪ್ರೆಸ್‌ಕ್ಲಬ್ನಲ್ಲಿ ರವಿವಾರ ನಡೆದ ಜನಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಗರಣದ ಬಗ್ಗೆ ದಾಖಲೆಗಳಿದ್ದರೆ ಕೇಂದ್ರ ಸರಕಾರ ಬಹಿರಂಗಪಡಿಸಲಿ. ಕೇವಲ ವಿವಾದ ಹುಟ್ಟು ಹಾಕಿ ಬೆದರಿಸುವ ತಂತ್ರ ಫಲಿಸದು. ಹಗರಣ ನಡೆದಿದೆ ಎಂಬ ಬಗ್ಗೆ ದಾಖಯನ್ನು ಜನತೆಯ ಮುಂದಿಡಲಿ. ದಾಖಲೆಗಳಿದ್ದಲ್ಲಿ ಕ್ರಮ ತೆಗೆದುಕೊಳ್ಳಲು ಯಾಕೆ ಹಿಂಜರಿಯುತ್ತೀರಿ ಎಂದು ಆ್ಯಂಟನಿ ಪ್ರಶ್ನಿಸಿದರು.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪ್ರಾತಿನಿಧ್ಯ ಲಭಿಸದಂತೆ ಎಚ್ಚರಿಕೆ ವಹಿಸಬೇಕು . ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಐಕ್ಯರಂಗ ಮತ್ತು ಬಿಜೆಪಿ ನಡುವೆ ಪೈಪೋಟಿಯಿದೆ. ಎಚ್ಚರ ತಪ್ಪಿದಲ್ಲಿ ಕೋಮು ಶಕ್ತಿಗೆ ಲಾಭ ಸಿಗಲಿದೆ ಎಂದರು. ಹೇಗಾದರೂ ಮಾಡಿ ಖಾತೆ ತೆರೆಯಬೇಕೆಂದು ಬಿಜೆಪಿ ಯತ್ನಿಸುತ್ತಿದೆ. ಮತ್ತೊಂದೆಡೆ ಸಿಪಿಎಂ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಯಾವುದೇ ಬೆಲೆ ತೆತ್ತಾದರೂ ಬಿಜೆಪಿಯ ಗೆಲುವನ್ನು ತಡೆಯಲು ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಮುಂದಾಗಿದ್ದು, ಬಿಜೆಪಿ ಬಲಗೊಂಡಲ್ಲಿ ಕೇರಳದ ಜಾತ್ಯಾತೀತ ವ್ಯವಸ್ಥೆಗೆ ಪೆಟ್ಟು ಬೀಳಲಿದೆ . ನೆಮ್ಮದಿಯ ಬದುಕೇ ಇಲ್ಲದಂತಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ ಶ್ರೀಧರನ್, ಪ್ರೆಸ್‌ಕ್ಲಬ್ ಅಧ್ಯಕ್ಷ ಸಣ್ಣಿ ಜೋಸೆಫ್, ಕಾರ್ಯದರ್ಶಿ ರವೀಂದ್ರನ್ ರಾವನೇಶ್ವರ ಉಪಸ್ಥಿತರಿದ್ದರು.
ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಚಿವ ಎ.ಕೆ. ಆ್ಯಂಟನಿ ಮಂಜೇಶ್ವರದ ವರ್ಕಾಡಿ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಸಮಾವೇಶದಲ್ಲಿ ಪಾಲ್ಗೊಂಡರು.