×
Ad

ಪುತ್ತೂರು: ವೈಜಯಂತೀ (ಯರ್ಮುಂಜ) ಪಂಚಾಂಗದ ಶತಮಾನೋತ್ಸವ

Update: 2016-05-01 17:50 IST

ಪುತ್ತೂರು, ಮೇ.1: ಭಾರತೀಯ ಸಂಸ್ಕೃತಿ ನಿಂತಿರುವುದೇ ಧರ್ಮಾಚರಣೆಯಲ್ಲಿ. ಆದ್ದರಿಂದ ವೇದಾಂಗ ಅಧ್ಯಯನ ಅಗತ್ಯ. ಪ್ರಕೃತಿಯ ಬಗ್ಗೆ ತಿಳಿದುಕೊಳ್ಳಲು ಪಂಚಾಂಗದ ಸಹಾಯ ಪಡೆದುಕೊಳ್ಳಲಾಗುತ್ತದೆ ಎಂದು ಶೃಂಗೇರಿ ರಾಜೀವಗಾಂಧಿ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ಪ್ರಾಧ್ಯಾಪಕ ವಿದ್ವಾನ್ ಸಚ್ಚಿದಾನಂದ ಉಡುಪ ಹೇಳಿದ್ದಾರೆ.

ರವಿವಾರ ಪೋಳ್ಯ ಮಠದ ಶ್ರೀನಿವಾಸ ಸಭಾಭವನದಲ್ಲಿ ನಡೆದ ವೈಜಯಂತೀ (ಯರ್ಮುಂಜ) ಪಂಚಾಂಗದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪೂರ್ವಿಕರು ಶ್ರಮಪಟ್ಟು ಮಾಡಿರುವ ಸಾಧನೆಯನ್ನು ಮುಂದುವರಿಸುವುದು ಹಿರಿಯರಿಗೆ ನೀಡುವ ಗೌರವ ಎಂದ ಅವರು ಕ್ರಿ.ಶ. 5ನೆ ಶತಮಾನದಲ್ಲೇ ಗ್ರಹಗಳ ನಡುವಿನ ಅಂತರವನ್ನು ತಿಳಿದುಕೊಳ್ಳಲು ಪ್ರತಿದಿನ 8 ಮಂದಿಯನ್ನು ಎಂಟು ದಿಕ್ಕಿಗೆ ಎತ್ತರದ ಜಾಗದಲ್ಲಿ ನಿಲ್ಲಿಸಲಾಗುತ್ತಿತ್ತು. ಸೂರ್ಯ ಚಂದ್ರರ ಅಂತರವನ್ನು ಪಂಚಾಂಗ ತಿಳಿಸಿಕೊಡುತ್ತಿತ್ತು. ಇದಕ್ಕೆ ಅನುಗುಣವಾಗಿ ಉತ್ಸವ, ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂದು ನಾವು ಕ್ಯಾಲೆಂಡರ್‌ಗಷ್ಟೇ ಸೀಮಿತಗೊಂಡಿದ್ದೇವೆ ಎಂದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ.ಈ.ಮಹಾಬಲ ಭಟ್ ಮಾತನಾಡಿ, ಆಕ್ಷೇಪಣೆ ಬಾರದೆ ಇದ್ದರೆ ಸವಾಲು ಎದುರಿಸಲು ತಾಕತ್ತು ಇರುವುದಿಲ್ಲ. ಆತ್ಮವಿಶ್ವಾಸದಿಂದ ಸವಾಲನ್ನು ಎದುರಿಸಬೇಕು. ಶ್ವಾಸದ ಜೊತೆ ವಿಶ್ವಾಸವೂ ಅಗತ್ಯ. ಧರ್ಮಶಾಸ್ತ್ರಗಳು ಕಾಲಕಾಲಕ್ಕೆ ಬದಲಾಗಿಲ್ಲ ಎಂಬ ಕೊರಗು ಹಲವರಲ್ಲಿದೆ. ಆದರೆ ಜ್ಯೋತಿಷ್ಯ ಶಾಸ್ತ್ರ ಹಾಗಲ್ಲ, ಕಾಲಕ್ಕೆ ತಕ್ಕಂತೆ ಒಗ್ಗಿಕೊಂಡಿದೆ. ಅಧ್ಯಯನ ಶೀಲತೆ ಇಲ್ಲದೇ ಇರುವುದರಿಂದ ದಿವ್ಯಶಾಸ್ತ್ರದ ಬಗ್ಗೆ ತಪ್ಪುಕಲ್ಪನೆ ಬೆಳೆದುಬಿಟ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಸಂಸ್ಕೃತ ಮಹಾ ಪಾಠಶಾಲಾ ನಿವೃತ್ತ ಜ್ಯೌತಿಷ ಪ್ರಾಧ್ಯಾಪಕ ಸಾಲಿಗ್ರಾಮ ಶ್ರೀನಿವಾಸ ಅಡಿಗ ಮಾತನಾಡಿ, ಸೂರ್ಯ- ಚಂದ್ರರಿಲ್ಲದೇ ಕಾಲವೇ ಇಲ್ಲ. ಚೆನ್ನಾಗಿ ಕೃಷಿ ಮಾಡಿದ ಗ್ರಂಥಗಳು ನಮ್ಮ ಮುಂದಿರುವುದರಿಂದ ಸಂಶೋಧನೆ ಕಡಿಮೆಯಾಗಿದೆ. ಗಣಿತಶಾಸ್ತ್ರದ ಅಧ್ಯಯನದ ಕಡೆ ಇನ್ನಷ್ಟು ಒಲವು ಹರಿಯಬೇಕು ಎಂದರು.

ಈ ಸಂದರ್ಭದಲ್ಲಿ ಶತಮಾನೋತ್ಸವದ ಸ್ಮರಣಸಂಚಿಕೆ ‘ಕಾರ್ತಾಂತಿಕಗೀರ್ಗುಚ್ಛಃ’ವನ್ನು ಅನಾವರಣ ಮಾಡಲಾಯಿತು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಸುಬ್ಬಣ್ಣ ಜೋಯಿಷ ಚವರ್ಕಾಡು, ಜನಾರ್ದನ ಜೋಯಿಷ ಉಪಸ್ಥಿತರಿದ್ದರು.

ವೈಜಯಂತೀ ಪಂಚಾಂಗದ ಸಂಪಾದಕ ಶಂಕರ ಜೋಯಿಷ ಪಂಚಾಂಗ ಪರಿಚಯ ಮಾಡಿದರು. ಸಹಸಂಪಾದಕ ಭೀಮ ಜೋಯಿಸ ಯರ್ಮುಂಜ ಸ್ವಾಗತಿಸಿ, ಬಾಲಕೃಷ್ಣ ಜೋಯಿಷ ಯರ್ಮುಂಜ ವಂದಿಸಿದರು. ರಮೇಶ್ ಜೋಯಿಷ ಯರ್ಮುಂಜ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಗೋಷ್ಠಿಯಲ್ಲಿ ಜ್ಯೌತಿಷ ವಿದ್ವಾಂಸ ಬೋಳಂತಕೋಡಿ ರಾಮ ಭಟ್, ಉಮ್ಮಚಿಗೆ ಶ್ರೀಮಾತಾ ಸಂಸ್ಕೃತ ಪಾಠಶಾಲಾ ಜ್ಯೌತಿಷ ಪ್ರಾಧ್ಯಾಪಕ ಕೆ.ಸಿ.ನಾಗೇಶ ಭಟ್ ಪ್ರಬಂಧ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News