ಚಂಡಿಗಢ: ಬಂದೂಕು ತೋರಿಸಿ 12ಕೋಟಿ ರೂ.ಚಿನ್ನಾಭರಣ ದರೋಡೆ
ಚಂಡಿಗಢ, ಮೆ1: ಚಂಡಿಗಡ ಸೆಕ್ಟರ್ 17ರ ಫೋರ್‌ಎವರ್ ಡೈಮಂಡ್ಸ್ ಶೋರೂಂಗೆ ನುಗ್ಗಿದ ದರೋಡೆಕೋರರು ನೌಕರರಿಗೆ ಬಂದೂಕು ತೋರಿಸಿ ಹನ್ನೆರಡು ಕೋಟಿ ರೂ. ಮೌಲ್ಯದ ದರೋಡೆ ನಡೆಸಿದ ಘಟನೆ ವರದಿಯಾಗಿದೆ. ದರೋಡೆಕೋರರು ದೋಚಿರುವ ಜ್ಯುವೆಲ್ಲರಿಯ ಒಟ್ಟು ಮೊತ್ತ ಹನ್ನೆರಡು ಕೋಟಿ ರೂಪಾಯಿ ಎಂದು ಮಾಲಕರ ಸಹೋದರ ಸ್ಪಷ್ಟಪಡಿಸಿದ್ದಾರೆ.
ರವಿವಾರ ಮಧ್ಯಾಹ್ನ 12;30ಕ್ಕೆ ಇಬ್ಬರು ಯುವಕರು ಮತ್ತು ಓರ್ವ ಯುವತಿಯನ್ನೊಳಗೊಂಡ ತಂಡ ಜ್ಯುವೆಲ್ಲರಿ ಶೋರೂಂಗೆ ಬಂದು ನೌಕರನೊಬ್ಬನಲ್ಲಿ ಆಭರಣಗಳನ್ನು ತೋರಿಸಲು ಹೇಳಿ ತಡೆದು ನಿಲ್ಲಿಸಿದರು. ತರುವಾಯ ಅವರಲ್ಲೊಬ್ಬ ಯುವಕ ಬಂದೂಕನ್ನು ನೌಕರನಿಗೆ ಗುರಿಯಾಗಿಟ್ಟು ಶೋರೂಂನಲ್ಲಿದ್ದ ಮಾಲಕರನ್ನು ಕೂಡಾ ತನ್ನ ವಶಕ್ಕೆ ಪಡೆದು ದರೋಡೆಗೈದಿರುವುದಾಗಿ ವರದಿಗಳು ತಿಳಿಸಿವೆ.
ಶೋರೂಂನ ಮಾಲಕರ ಸಹೋದರ, ದರೋಡೆ ನಡೆದ ಸಮಯದಲ್ಲಿ ಆರುಮಂದಿ ನೌಕರರು ಇದ್ದರು ಮತ್ತು ದರೋಡೆ ನಡೆಸಿದ ವ್ಯಕ್ತಿಗಳು ಶನಿವಾರದಂದು ಉಂಗುರ ಮಾಡಿಸುವ ನೆಪದಲ್ಲಿ ಬಂದಿದ್ದರು ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಆಪರೇಶನ್ ಸೆಲ್, ಕ್ರೈಂ ಬ್ರಾಂಚ್ ಪೊಲೀಸರು ಆರಂಭಿಸಿದ್ದಾರೆ. ತನಿಖೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಪೊಲೀಸರು ನಿರಾಕರಿಸಿರುವುದಾಗಿ ವರದಿಯಾಗಿದೆ.