×
Ad

ಎಡ-ಐಕ್ಯರಂಗಗಳ ನಿರ್ಲಕ್ಷದಿಂದ ಮಂಜೇಶ್ವರ ಕ್ಷೇತ್ರ ಅಭಿವೃದ್ಧಿ ವಂಚಿತ: ಕೆ.ಸುರೇಂದ್ರನ್

Update: 2016-05-01 20:13 IST

ಮಂಜೇಶ್ವರ, ಮೇ 1: ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದುಳಿದಿರುವ ಮಂಜೇಶ್ವರ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ಗ್ರಾಪಂಗಳಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಜನರು ಪರದಾಡುವಂತಾಗಿದೆ. ಈ ಹಿಂದೆ ಗೆದ್ದ ಶಾಸಕರುಗಳ ನಿರ್ಲಕ್ಷ್ಯಹಾಗೂ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆಲ್ಲಾ ಕಾರಣ. ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳು ಮಂಜೇಶ್ವರ ಮಂಡಲದ ಮತದಾರರನ್ನು ಸಂಪೂರ್ಣವಾಗಿ ವಂಚಿಸಿರುವುದಾಗಿ ಇಲ್ಲಿನ ನಿದರ್ಶನಗಳಿಂದ ಸ್ಪಷ್ಟವಾಗುತ್ತದೆ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.

ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಜನತೆಗೆ ಆಶಾಕಿರಣವಾಗಬೇಕಿದ್ದ ವಿದ್ಯಾಭ್ಯಾಸ ಹಾಗೂ ಕ್ರೀಡಾರಂಗವು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಶೂನ್ಯವಾಗಿದೆ. ಉದ್ಯೋಗಾರ್ಥಿಗಳಿಗೆ ಸರಿಯಾದ ಉದ್ಯೋಗ ಲಭಿಸದೆ ಬೇಸರದಿಂದ ಜೀವಿಸುವಂತಾಗಿದೆ. ಆರ್ಥಿಕ ಸಂಕಷ್ಟ ಇಲ್ಲಿನ ಬಹುದೊಡ್ಡ ಸಮಸ್ಯೆಯಾಗಿದೆ. ಎಸ್ಸೆಸ್ಸೆಲ್ಸಿ ನಂತರ ಇಲ್ಲಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕಕ್ಕೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ಸ್ವಾತಂತ್ರದ ಬಳಿಕ ಕೇರಳವನ್ನಾಳಿದ ಎಡರಂಗ ಮತ್ತು ಐಕ್ಯರಂಗ ಒಕ್ಕೂಟಗಳಿಗೆ ವರ್ಕಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ಒಂದು ಸರಕಾರಿ ಪ್ರೌಢಶಾಲೆಯನ್ನು ಆರಂಭಿಸಲು ಸಾಧ್ಯವಾಗದಿರುವುದು ನಾಚಿಕೆಗೇಡು ಎಂದ ಅವರು, ಮಾನ್ಯತೆ ಹೊಂದಿರುವ ಕಾಲೇಜುಗಳು ಈ ಕ್ಷೇತ್ರದಲ್ಲಿಲ್ಲ. ತಾಂತ್ರಿಕ, ಮೆಡಿಕಲ್, ಐಟಿ, ವಿಜ್ಞಾನ, ಕಾನೂನು ಶಿಕ್ಷಣ ಇತ್ಯಾದಿ ವಿದ್ಯಾರ್ಥಿಗಳಿಗೆ ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News