ಪುತ್ತೂರು: 4.50 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವು
ಪುತ್ತೂರು, ಮೇ 1: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಡೆ ಕಪಾಟಿನಲ್ಲಿರಿಸಿದ್ದ ಸುಮಾರು 4.50 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ನಗರದ ದರ್ಬೆ ನಿವಾಸಿ ಕೆ.ಪ್ರಭಾಕರ ಶೆಣೈ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಭಾಕರ್ ಶೆಣೈರ ಕುಟುಂಬಸ್ಥರು ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶನಿವಾರ ಮನೆಗೆ ಬೀಗ ಹಾಕಿ ಕೇರಳದ ಕೋಝಿಕ್ಕೋಡ್‌ಗೆ ತೆರಳಿದ್ದರು. ರವಿವಾರ ಬೆಳಗ್ಗೆ ಹಾಲು ಸರಬರಾಜು ಮಾಡುವ ಯುವಕ ಮನೆ ಬಾಗಿಲಿಗೆ ಬಂದಾಗ ಕಳವಿನ ವಿಚಾರ ಬೆಳಕಿಗೆ ಬಂದಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಬೆಳ್ಳಿಯ ಸೊತ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಮನೆಯಲ್ಲಿದ್ದ ವಜ್ರದ ಬೆಂಡೋಲೆ, ಚಿನ್ನದ ಮಂಗಳ ಸೂತ್ರ, 4 ಕೈಬಳೆಗಳು ಸೇರಿದಂತೆ ಒಟ್ಟು 4.50 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಆದರೆ ಕಪಾಟಿನಲ್ಲಿದ್ದ ಇದ್ದ ವಿದೇಶಿ ಕರೆನ್ಸಿಗಳನ್ನು ಹಾಗೆಯೇ ಬಿಟ್ಟಿದ್ದಾರೆ.
ಶನಿವಾರ ತಡರಾತ್ರಿ ಕಳ್ಳರು ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಭಾಕರ ಶೆಣೈರ ಅಣ್ಣನ ಮನೆ ಈ ಮನೆಯ ಪಕ್ಕದಲ್ಲಿಯೇ ಇದೆ. ಕಳವಿನ ವಿಚಾರವನ್ನು ಅವರ ಅಣ್ಣನ ಮಗ ಕೆ. ಪ್ರಶಾಂತ್ ಶೆಣೈ ಎಂಬವರು ಪುತ್ತೂರು ನಗರ ಪೊಲೀಸರಿಗೆ ತಿಳಿಸಿದರು. ಪೊಲೀಸರು ಪ್ರಭಾಕರ್ ಶೆಣೈಗೆ ವಿಚಾರ ತಿಳಿಸಿದ್ದು, ಕೂಡಲೇ ಅವರು, ತಮ್ಮ ಅಣ್ಣನ ಮಗ ಕೆ. ವಿಶ್ವಾಸ್ ಶೆಣೈ ಜೊತೆಗೆ ಕಾರಿನಲ್ಲಿ ಬಂದು ಸಂಜೆ ವೇಳೆ ಪುತ್ತೂರಿಗೆ ತಲುಪಿದರು.ಮನೆಯವರ ಸಮಕ್ಷಮದಲ್ಲಿ ಮನೆಯ ಮಹಜರು ನಡೆಸಲಾಯಿತು. ಕಳವಾದ ಸೊತ್ತುಗಳ ವಿವರವನ್ನು ಸಂಗ್ರಹಿಸಲಾಯಿತು.
ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಮಹೇಶ್ ಪ್ರಸಾದ್, ನಗರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.