ಆರ್ಥಿಕತೆ ಬಗ್ಗೆ ಋಣಾತ್ಮಕ ಹೇಳಿಕೆ ವಿರುದ್ಧ ದಂಡ: ವದಂತಿಗೆ ದುಬೈ ನಿರಾಕರಣೆ

Update: 2016-05-01 18:37 GMT

ದುಬೈ: ದೇಶದ ಆರ್ಥಿಕಕತೆ ಬಗೆಗಿನ ಋಣಾತ್ಮಕ ಹೇಳಿಕೆಗಾಗಿ ವ್ಯಕ್ತಿಗಳು ಹಾಗೂ ಕಂಪನಿಗಳಿಗೆ ದಂಡ ವಿಧಿಸಲಾಗಿಇದೆ ಎಂದು ವದಂತಿಯನ್ನು ದುಬೈನ ಆರ್ಥಿಕ ಅಭಿವೃದ್ಧಿ ಇಲಾಖೆ ನಿರಾಕರಿಸಿದೆ.

ಇಂಥ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಯಾವುದೇ ಸರ್ಕಾರಿ ಇಲಾಖೆಗಳಿಗೆ ಅಂಥ ಅಭಿಪ್ರಾಯಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಿಲ್ಲ. ಅಥವಾ ಅಂಥ ಹೇಳಿಕೆಯಲ್ಲಿ ಯಾವ ಉಲ್ಲಂಘನೆಯೂ ಆಗಿಲ್ಲ ಎಂದು ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.

ಸ್ಥಳೀಯ ಮೆಟ್ರೊ ನಿಲ್ದಾಣವೊಂದರಲ್ಲಿ ಇಂಥ ಋಣಾತ್ಮಕ ಹೇಳಿಕೆ ನೀಡಿದ ವ್ಯಕ್ತಿಗೆ ದಂಡ ವಿಧಿಸಲಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ವಹಿವಾಟು ಕುಸಿದಿದೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಆತನಿಗೆ ದಂಡ ವಿಧಿಸಲಾಗಿದೆ ಎಂಬ ವದಂತಿ ಹಬ್ಬಿತ್ತು. ಇಂಥ ವದಂತಿಗಳಿಗೆ ಕಿವಿಗೊಡದಂತೆಯೂ ಹೇಳಿಕೆ ಮನವಿ ಮಾಡಿದೆ.

ವ್ಯಾಪಾರಿ ಸಮುದಾಯ ಕೂಡಾ ಆರ್ಥಿಕ ಅಭಿವೃದ್ಧಿ ಇಲಾಖೆ ಹೇಳಿಕೆಗೆ ದನಿಗೂಡಿಸಿದ್ದು, ಇಮ್ಯಾಕ್ಸ್ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ ನೀಲೇಶ್ ಭಟ್ನಾಗರ್ ಈ ಸಂಬಂಧ ಹೇಳಿಕೆ ನೀಡಿ, "ನಾನು ಕೂಡಾ ಇಂಥ ವದಂತಿ ಕೇಳಿದ್ದೇನೆ. ಇಂಥ ವದಂತಿ ತಳ್ಳಿಹಾಕುವಲ್ಲಿ ದುಬೈ ಸರ್ಕಾರ ಸಕಾಲಿಕ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಸ್ಥೈರ್ಯವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದೆ" ಎಂದು ಹೇಳಿದ್ದಾರೆ.

ದನುಬೆ ಉದ್ಯಮ ಸಮೂಹದ ಅಧ್ಯಕ್ಷ ರಿಜ್ವಾನ್ ಸಾಜನ್, "ನಾನು ಈ ವದಂತಿಯನ್ನು ಎಂದೂ ನಂಬಿಲ್ಲವಾದರೂ, ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡುವ ಮೂಲಕ ದಿಟ್ಟ ಕ್ರಮ ಕೈಗೊಂಡಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News