×
Ad

ಇದು ಚಿನ್ನಕ್ಕಿಂತ 30 ಪಟ್ಟು ಹೆಚ್ಚು ದುಬಾರಿ ಟೀ!

Update: 2016-05-02 10:17 IST

2002ರಲ್ಲಿ ಚೀನಾದ ಪುರಾತನ ದಾ ಹೋಂಗ್ ಪಾವೋ ಚಹಾದ 20 ಗ್ರಾಂ ಗಳಿಗೆ ಶ್ರೀಮಂತನೊಬ್ಬ 1,80,000 ಯುವಾನ್ ಅಂದರೆ 28,000 ಡಾಲರ್ ಕೊಟ್ಟು ಖರೀದಿಸಿದ. 1500 ವರ್ಷಗಳಿಂದ ಚಹಾ ಕುಡಿಯುವುದು ಒಂದು ಕಲೆಯಾಗಿರುವ ಸಂಸ್ಕೃತಿಯಲ್ಲೂ ಇದು ಅಭೂತಪೂರ್ವ. ಮೂಲ ದಾ ಹೋಂಗ್ ಪಾವೋ ಚಹಾ ಚಿನ್ನದ ತೂಕದಲ್ಲಿ ಸಿಗುವುದು ಮಾತ್ರವಲ್ಲ, ಚಿನ್ನಕ್ಕಿಂತ 30 ಪಟ್ಟು ಅಧಿಕ ಬೆಲೆ ಬಾಳುತ್ತದೆ. ಸುಮಾರು ಗ್ರಾಂ ಒಂದಕ್ಕೆ 1,400 ಡಾಲರ್ ಬೆಲೆ ಬಾಳುತ್ತದೆ. ಕುಡಿಕೆ ಬೇಕೆಂದರೆ 10,000 ಡಾಲರ್. ಜಗತ್ತಿನಲ್ಲೇ ಇದು ಅತೀ ದುಬಾರಿ ಚಹಾ.

ವೂಯಿಶಾನ್ ಪ್ರಾಂತವು ಶತಮಾನಗಳಿಂದ ಚಹಾಗೆ ಪ್ರಸಿದ್ಧಿ ಪಡೆದಿದೆ. ಇಲ್ಲೇ ದಾ ಹೋಂಗ್ ಪಾವೋ ಚಹಾ ಬೆಳೆಯುವುದು. ಪ್ರಕೃತಿಯ ರಮಣೀಯ ತಪ್ಪಲಲ್ಲಿರುವ ಈ ಪ್ರಾಂತದಲ್ಲಿ ಚಹಾ ರುಚಿ ನೋಡುವ ವೇದಿಕೆಯೂ ಇದೆ. ವೂಶಿಯಾನ್‌ಗೆ ಪ್ರಯಾಣ ಬೆಳೆಸಿದರೆ ದಾ ಹೋಗ್ ಪಾವೋ ಚಹಾ ಅಚ್ಚರಿಯೆನ್ನುವಷ್ಟು ಅಗ್ಗದಲ್ಲಿ ಸಿಗುತ್ತದೆ. ಆದರೆ ಹಳೆಯದಾದ ಪುರಾತನ ಚಹಾ ಎಲೆಗಳು ದುಬಾರಿ ಇರುತ್ತವೆ. ಸಾಮಾನ್ಯ ಗುಣಮಟ್ಟದ ದಾ ಹೋಂಗ್ ಪಾವೋ ಚಹಾ ವುಯಿಶಾನ್ ಪ್ರಾಂತದಲ್ಲಿ ಕಿಲೋಗೆ 100 ಡಾಲರಿಗೆ ಸಿಗುತ್ತದೆ. ಆದರೆ ನೈಜ ದಾ ಹೋಂಗ್ ಪಾವೋ ಒಂದೇ ಗುಂಪಿನ ತಾಯಿ ಮರಗಳಿಂದ ಪಡೆಯಲಾಗುತ್ತದೆ. ಈ ಮೂಲ ಮರಗಳು ಅಪರೂಪದ ಚಹಾವನ್ನು ಕೊಡುತ್ತವೆ. ಮೂಲ ಚಹಾ ಮರಗಳು ಅತೀ ಅಪರೂಪವಾಗಿರುವ ಕಾರಣದಿಂದಲೇ ಅವುಗಳ ಬೆಲೆಯೂ ದುಬಾರಿ. ಪಾರಂಪರಿಕ ಚಹಾ ಎಲೆಗಳು ಇನ್ನೂ ಹೆಚ್ಚು ಬೆಲೆ ಬಾಳುತ್ತವೆ. ಚೀನಾದ ಚಹಾ ಎಲೆಗಳನ್ನು ಸಂಗ್ರಹಿಸುವ ಹುಚ್ಚಿರುವ ಶ್ರೀಮಂತರಿಗಾಗಿಯೇ ದಲ್ಲಾಳಿಗಳು ಇಂತಹ ಪಾರಂಪರಿಕ ದಾ ಹೋಂಗ್ ಪಾವೋ ಎಲೆಗಳನ್ನು ಹುಡುಕಿ ತೆಗೆಯುತ್ತಾರೆ. ಮಾರಲು ಬಯಸುವವರು ಮತ್ತು ಖರೀದಿಸಲು ಬಯಸುವವರನ್ನು ಈ ಮಧ್ಯವರ್ತಿಗಳು ಜೋಡಿಸುತ್ತಾರೆ.

ವಾಸ್ತವದಲ್ಲಿ ಚೀನೀಯರಿಗೆ ಮಾತ್ರ ದಾ ಹೋಂಗ್ ಪಾವೋ ಇಷ್ಟು ಅಮೂಲ್ಯ. 1849ರಲ್ಲಿ ಬ್ರಿಟಿಷ್ ಸಸ್ಯತಜ್ಞ ರಾಬರ್ಟ್ ಫೋರ್ಚೂನ್ ವುಶಿಯಾನ್ ಪರ್ವತ ಶ್ರೇಣಿಗೆ ರಹಸ್ಯವಾಗಿ ಬಂದಿದ್ದ. ಬ್ರಿಟಿಷರು ಆಗಲೂ ಮತ್ತು ಈಗಲೂ ಚಹಾ ಪ್ರೇಮಿಗಳು. ಚೀನಾದಿಂದಲೇ ಬ್ರಿಟಿಷರು ರೇಷ್ಮೆ ಮತ್ತು ಪಾರ್ಸಲಿನ್ ಜೊತೆಗೆ ಚಹಾ ಪಡೆಯುತ್ತಿದ್ದರು. ಆದರೆ ಬ್ರಿಟಿಷರು ಚೀನಾದಿಂದ ಆಮದು ಮಾಡಿಕೊಳ್ಳುವುದು ಕಡಿಮೆ ಮಾಡಿ ಭಾರತದಲ್ಲಿಯೇ ಚಹಾ ಬೆಳೆಯಲು ಆರಂಭಿಸಿ ಈ ಪ್ರಾಂತದ ವ್ಯಾಪಾರಕ್ಕೆ ಧಕ್ಕೆ ತಂದಿದ್ದರು. ಆದರೆ ಚೀನಾದ ದಾ ಹೋಂಗ್ ಪಾವೋ ಚಹಾವನ್ನು ಬೇರೆ ಪ್ರಾಂತದಲ್ಲಿ ಬೆಳೆಯಲು ಬ್ರಿಟಿಷರಿಗೂ ಸಾಧ್ಯವಾಗಲಿಲ್ಲ. ಫಾರ್ಚೂನ್ ರಹಸ್ಯವಾಗಿ ಚೀನಾಗೆ ಹೋಗಿದ್ದೇ ಅಲ್ಲಿನ ಅತ್ಯುತ್ತಮ ಚಹಾ ದಾ ಹೋಂಗ್ ಪಾವೋ ಗರಿಮೆಯನ್ನು ಕೆಳಗಿಳಿಸಲು. ಅದನ್ನು ಹೇಗೆ ಬೆಳೆಯುತ್ತಾರೆ ಎನ್ನುವುದನ್ನು ಕಲಿತು ನಕಲು ಮಾಡಲು. ಚಹಾ ತೋಟಗಳು ಚೀನಾದಲ್ಲಿ ಇಂದಿಗೂ ಮತ್ತು ಅಂದಿಗೂ ಪರ್ವತ ಶ್ರೇಣಿಯುದ್ದಕ್ಕೂ ಬೆಳೆಯಲಾಗುತ್ತಿದೆ.

ದಾ ಹೋಂಗ್ ಪಾವೋ ತಪ್ಪಲಿನ ಥಿಯಾನ್‌ಕ್ಸಿನ್ ಯೋಂಗಲ್ ದೇಗುಲದ ಬಳಿ ನೆಲೆಸಿದ ಫಾರ್ಚೂನ್ ಅತ್ಯುತ್ತಮ ಚಹಾ ಹೇಗೆ ತಯಾರಿಸಲಾಗುತ್ತದೆ ಎಂದು ಗಮನಿಸಿದರು. ಸಸ್ಯತಜ್ಞ ಚಹಾದ ಬೀಜಗಳು, ಗಿಡಗಳು ಮತ್ತು ಬೆಳೆಯುವ ರಹಸ್ಯವನ್ನು ಪಡೆದುಕೊಂಡರು. ಭಾರತಕ್ಕೆ ತಲುಪಿದಾಗ ಆ ಬೀಜಗಳನ್ನು ಭಾರತೀಯ ಚಹಾದ ಜೊತೆಗೆ ಸೇರಿಸಲಾಯಿತು. ಹೀಗೆ ವಾರ್ಷಿಕವಾಗಿ ಲಕ್ಷಾಂತರ ಲಾಭ ತರುವ ಉದ್ಯಮ ಬೆಳೆಯಿತು.

ಥಿಯಾನ್‌ಕ್ಸಿನ್ ಯೋಂಗಲ್ ದೇಗುಲವನ್ನು ಕ್ರಿಸ್ತ ಪೂರ್ವ 827ರಲ್ಲಿ ಸ್ಥಾಪಿಸಲಾಗಿತ್ತು. 1958ರಲ್ಲಿ ಮಾವೋ ಕಾಲದಲ್ಲಿ ಬೌದ್ಧ ಸನ್ಯಾಸಿಗಳನ್ನು ಹೊರದೂಡಲಾಯಿತು. ಜೊತೆಗೇ ಚಹಾ ತಯಾರಿಸುವ ಜ್ಞಾನವೂ ಹೊರಟು ಹೋಯಿತು. ಸುಜೌನಿಂದ ಝೆ 1990ರಲ್ಲಿ ಇಲ್ಲಿಗೆ ಬಂದಾಗ ಯಾರೂ ಇರಲಿಲ್ಲ. ಅವರೇ ಈಗ ಕೆಲವು ಅನುಯಾಯಿಗಳ ಜೊತೆಗೂಡಿ ಚಹಾ ಬೆಳೆಯಲು ಆರಂಭಿಸಿದ್ದಾರೆ. ಮೂಲ ದಾ ಹೋಂಗ್ ಪಾವೋ ಮರಗಳು ದೇವಾಲಯದ ಭೂಮಿಯಲ್ಲಿತ್ತು. ಝೆ ಅವನ್ನು ಸರ್ಕಾರಕ್ಕೆ ನಿಭಾಯಿಸಲು ಬಿಟ್ಟಿದ್ದಾರೆ.

ಬೆಳೆದ ಕೆಲವು ನೂರು ಗ್ರಾಂ ಚಹಾ ಕೂಡ ಸರ್ಕಾರಕ್ಕೆ ಹೋಗುತ್ತದೆ. ಇತ್ತೀಚೆಗಿನವರೆಗೂ ಸಶಸ್ತ್ರ ಸೇನೆಯ ಕಾವಲೂ ಇಲ್ಲಿತ್ತು. ಆದರೆ ಈ ಮುದಿ ಗಿಡಗಳು ಇನ್ನು ಚಿಗುರುವ ನಿರೀಕ್ಷೆ ಇಡುವುದೂ ಕಷ್ಟ. ಆದರೆ ಇನ್ನೇನು ಮೇ ಆರಂಭವಾಗುತ್ತಲೇ ಚಹಾ ಬೆಳೆಯಲು ಆರಂಭಿಸಲಾಗುತ್ತದೆ. ಆದರೆ ದಾ ಹೋಂಗ್ ಪಾವೋದಲ್ಲಿ 2005ರಲ್ಲಿ ಕೊನೆಯ ಬಾರಿ ಚಹಾ ಎಲೆ ಕೀಳಲಾಗಿತ್ತು. ನಂತರ ಅದರಲ್ಲಿ ಮತ್ತೊಮ್ಮೆ ಚಹಾ ಆಗುವ ನಿರೀಕ್ಷೆಯಿಲ್ಲ. ಹೀಗಾಗಿ ಈ ಹಿಂದೆ ಕಿತ್ತ ಚಹಾ ಎಲೆಗಳನ್ನೇ ಒಣಗಿಸಿ ಸಂಗ್ರಹಿಸಿಡಲಾಗುತ್ತದೆ. ವಜ್ರಗಳಂತೆ ಮಾರಲಾಗುತ್ತದೆ.

ಕೃಪೆ: www.bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News