ಪುತ್ತೂರು: ವಿದ್ಯುತ್ ಆಘಾತ; ಮೂವರು ಮೃತ್ಯು

Update: 2016-05-02 09:26 GMT

ಪುತ್ತೂರು, ಮೇ 2: ವಿದ್ಯುತ್ ಶಾಕ್ ಹೊಡೆದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಬೆಳ್ಳಿಪ್ಪಾಡಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. 

ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಸಮೀಪದ ಎಣ್ಣೆತ್ತೋಡಿ ಎಂಬಲ್ಲಿ ನಡೆದ ಈ ಅವಘಡದಲ್ಲಿ ಎಣ್ಣೆತ್ತೋಡಿ ನಿವಾಸಿಗಳಾದ ಬಾಬುಗೌಡ (55), ಸೇಸಪ್ಪ ಗೌಡ (41) ಮತ್ತು ಕಾರ್ತಿಕ್ ಗೌಡ (20) ಎಂಬವರು ಮೃತಪಟ್ಟವರು.

ಬಾಬುಗೌಡ ಅವರ ತೋಟದಲ್ಲಿ ಮೂವರು ಜೊತೆಯಾಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಬಾಬು ಗೌಡ ಮತ್ತು ಟಿಪ್ಪರ್ ಚಾಲಕರಾಗಿರುವ ಸೇಸಪ್ಪ ಗೌಡ ಅವರು ಸಹೋದರರಾಗಿದ್ದು, ಕಾರ್ತಿಕ್ ಗೌಡ ಬಾಬುಗೌಡರ ಇನ್ನೋರ್ವ ಸಹೋದರ ಬೊಮ್ಮಣ್ಣ ಗೌಡ ಎಂಬವರ ಪುತ್ರ. ಕಾರ್ತಿಕ ಸುಳ್ಯ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮ ವಿದ್ಯಾರ್ಥಿ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಇವರಿಗೆ ವಿದ್ಯುತ್ ತಂತಿಯಿಂದ ಶಾಕ್ ಉಂಟಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ವೇಳೆಗಾಗಲೇ ಮೂವರೂ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. 

ಮೃತ ಬಾಬುಗೌಡರ ಸಹೋದರನ ಮನೆಯಲ್ಲಿ ಮೇ 3 ರಂದು ಹೋಮ ನಡೆಯಲಿದ್ದು, ಇದಕ್ಕೆ ಬಳಸಲೆಂದು ಅಡಿಕೆ ಹಿಂಗಾರ ತೆಗೆಯಲು ಬಾಬುಗೌಡ ಅವರು ಕಬ್ಬಿಣದ ಏಣಿಯನ್ನು ಹಿಡಿದುಕೊಂಡು ತೋಟಕ್ಕೆ ಹೋಗಿದ್ದು, ಈ ಸಂದರ್ಭ ತೋಟದೊಳಗೆ ಹಾದುಹೋಗಿರುವ ಪುತ್ತೂರು - ಉಪ್ಪಿನಂಗಡಿ 11 ಕೆವಿ ಹೆಚ್ ಟಿ ಲೈನ್ ಗೆ ಇವರ ಕೈಯಲ್ಲಿದ್ದ ಏಣಿ ತಾಗಿ ವಿದ್ಯುತ್ ಶಾಕ್ ಉಂಟಾಗಿ ಬಾಬು ಗೌಡರು ಗಂಭೀರ ಗಾಯಗೊಂಡರು. ಇವರನ್ನು ರಕ್ಷಿಸಲೆಂದು ತಕ್ಷಣ ಸೇಸಪ್ಪ ಗೌಡರು ಹೋಗಿದ್ದು ಈ ಸಂದರ್ಭ ಸೇಸಪ್ಪ ಗೌಡರಿಗೂ ವಿದ್ಯುತ್ ತಾಗಿ ಗಂಭೀರ ಗಾಯಗೊಂಡರು. ಇವರ ಬೊಬ್ಬೆ ಕೇಳಿ ಕಾರ್ತಿಕ್ ಆಗಮಿಸಿದ್ದು, ಈ ಸಂದರ್ಭದಲ್ಲಿ ತೋಟಕ್ಕೆ ಸ್ಪಿಂಕ್ಲರ್ ನಲ್ಲಿ ನೀರು ಹಾಯಿಸಿರುವ ಕಾರಣ ನೆಲದಲ್ಲಿ ಅರ್ತಿಂಗ್ ಉಂಟಾಗಿ ಕಾರ್ತಿಕ್ ಗೌಡ ಗಂಭೀರ ಗಾಯಗೊಂಡು ಮೃತಪಟ್ಟರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News