ಹಸಿವು ಜತೆ ಸಂಘ ಪರಿವಾರ ಮುಕ್ತ ಭಾರತಕ್ಕೆ ಸಚಿವ ರೈ ಕರೆ
ಮಂಗಳೂರು, ಮೇ 2: ಭಾರತವನ್ನು ಹಸಿವು ಮುಕ್ತಗೊಳಿಸುವ ಜತೆ ಸಂಘ ಪರಿವಾರ ಮುಕ್ತ ಭಾರತ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಬಳಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಆರೋಪವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸುಬ್ರಹ್ಮಣ್ಯ ಸ್ವಾಮಿಯಂತಹ ನೀಚ ವ್ಯಕ್ತಿಯ ಮಾತುಗಳು ನಮಗೆ ಅಗತ್ಯವಿಲ್ಲ. ಅಪಪ್ರಚಾರದ ಮೂಲಕ ಸಂಘ ಪರಿವಾರ ಶಕ್ತಿಗಳು ಅಧಿಕಾರ ಪಡೆಯಲು ಮಾಡುವ ಹುನ್ನಾರಕ್ಕೆ ಸರಿಯಾದ ಉತ್ತರ ನೀಡಬೇಕಾಗಿದೆ. ಯುವಜನತೆಯನ್ನು ಹಾದಿ ತಪ್ಪಿಸುವ ಸಂಘ ಪರಿವಾರದ ವಿರುದ್ದ ಯುವ ಕಾಂಗ್ರೆಸ್ ವತಿಯಿಂದ ನಿರಂತರ ಹೋರಾಟ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸುಮಾರು ೧೦ ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ ಜವಾಹರ್ ಲಾಲ್ ನೆಹರೂ, ಬಡವರಿಗೆ ನ್ಯಾಯ ದೊರಕಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಇಂದಿರಾ ಗಾಂಧಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ರಾಜೀವ್ ಗಾಂಧಿ ಅವರ ಮೇಲೂ ಸುಳ್ಳು ಆರೋಪ ಮಾಡುವ ಕೆಲಸ ಸಂಘ ಪರಿವಾರದಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಸೋನಿಯಾ ಗಾಂಧಿ ಅವರ ಮೇಲೆ ಆರೋಪ ಮಾಡುವ ಸಂಘ ಪರಿವಾರದ ಅಧಿಕಾರ ಲಾಲಸೆಯನ್ನು ಮೆಟ್ಟಿ ನಿಲ್ಲಬೇಕಾಗಿದೆ. ಪ್ರಜಾಪ್ರಭುತ್ವದ ಮೇಲೆ ವಿಶ್ವಾಸಯುಳ್ಳವರು ಇದನ್ನು ಖಂಡಿಸಬೇಕಾಗಿದೆ ಎಂದು ರೈ ಹೇಳಿದರು.
ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯಿದ್ದೀನ್ ಬಾವ, ಮೇಯರ್ ಹರಿನಾಥ್, ಮಿಥುನ್ ರೈ, ಮಾಜಿ ಮೇಯರ್ ಆಶ್ರಫ್, ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ , ಈಶ್ವರ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.