ಮಂಜೇಶ್ವರದಲ್ಲಿ ಮತ್ತೆ ಕಾಳಧನ ಪತ್ತೆ: ಯುವಕನ ಬಂಧನ
Update: 2016-05-02 17:15 IST
ಮಂಜೇಶ್ವರ, ಮೇ 2: ಚುನಾವಣಾ ನಿರೀಕ್ಷಣೆಯ ಹಿನ್ನೆಲೆಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಕಾರಿನಲ್ಲಿ ಕೊಂಡೊಯ್ಯಲಾಗುತ್ತಿದ್ದ 6 ಲಕ್ಷ ರೂ. ಸಹಿತ ಯುವಕನೋರ್ವನನ್ನು ಪೊಲೀಸರ ತಂಡ ಬಂಧಿಸಿದೆ.
ಬಂಧಿತನನ್ನು ಕಾಸರಗೋಡು ಎರಿಯಾಲಿನ ಮುಹಮ್ಮದ್ ಆರಿಫ್ (28) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಮಂಜೇಶ್ವರ ಉದ್ಯಾವರ ಹತ್ತನೆ ಮೈಲು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್ ನೇತೃತ್ವದ ಪೊಲೀಸ್ ತಂಡ ಯುವಕನನ್ನು ವಶಕ್ಕೆ ಪಡೆದುಕೊಂಡಿದೆ.
ಕಳೆದ ವಾರ ಇದೇ ರೀತಿ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ 6 ಲಕ್ಷ ರೂ. ಹಾಗೂ 2 ವಾರಗಳ ಹಿಂದೆ ಇದೇ ತಂಡದಿಂದ 4 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.