×
Ad

ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಲು ಎಸ್‌ಡಿಪಿಐ ಆಗ್ರಹ

Update: 2016-05-02 17:29 IST

ಮಂಗಳೂರು, ಮೆ.2: ಉಳ್ಳಾಲದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಸಾವಿಗೀಡಾದ ರಾಜು ಕೋಟ್ಯಾನ್ ಹಾಗೂ ಸಫ್ವಾನ್ ಕುಟುಂಬಕ್ಕೆ ಸರಕಾರ ತಕ್ಷಣ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಘಟಕದ ಉಪಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಉಳ್ಳಾಲದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಅಲ್ಲಿರುವ ಮಾದಕ ದ್ರವ್ಯ ವ್ಯಸನಿಗಳು ಹಾಗೂ ಅದನ್ನು ಸರಬರಾಜು ಮಾಡುವವರು ಪ್ರಮುಖವಾಗಿ ಕಾರಣಕರ್ತರಾಗಿದ್ದಾರೆ. ಉಳ್ಳಾಲ ಪರಿಸರದಲ್ಲಿ ಗಾಂಜಾ ಸೇರಿದಂತೆ ನಿಷೇಧಿತ ಅಮಲು ಪದಾರ್ಥಗಳ ಮಾರಾಟವನ್ನು ತಡೆಯಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಅಹಿತಕರ ಘಟನೆಗಳು ನಿರಂತರವಾಗಿ ನಡೆಯಲು ಪ್ರಮುಖ ಕಾರಣವಾಗಿದೆ ಎಂದು ಅಥಾವುಲ್ಲಾ ಆರೋಪಿಸಿದರು.

ಎ.12ರಂದು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ರಾಜು ಕೋಟ್ಯಾನ್ ಎಂಬ ಅಮಾಯಕ ಯುವಕನನ್ನು ಗಾಂಜಾ ವ್ಯಸನಿ ದುಷ್ಕರ್ಮಿಗಳ ತಂಡ ಹತ್ಯೆ ಮಾಡಿರುವುದು ಉಳ್ಳಾಲದ ಸರಣಿ ದುಷ್ಕೃತ್ಯದ ಆರಂಭವಾಗಿದೆ. ಬಳಿಕ ಎ.25ರಂದು ಉಳ್ಳಾಲ ವೀರಭದ್ರ ದೇವಸ್ಥಾನದ ಬಳಿ ಇಬ್ರಾಹೀಂ ಅಫ್ನಾನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ಅದೇ ದಿನ ತಡರಾತ್ರಿ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮೂರು ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸೈಫಾನ್ ಮೃತಪಟ್ಟಿದ್ದು, ಆತನ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.

ಮೃತದೇಹದ ಅಂತಿಮ ದರ್ಶನ ಪಡೆಯಲು ಸ್ಥಳೀಯ ಶಾಸಕರು, ಸಚಿವರಾಗಲೀ, ಜಿಲ್ಲಾಧಿಕಾರಿಯಾಗಲೀ ಭೇಟಿ ನೀಡಿಲ್ಲ. ಈ ನಡುವೆ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ ಈ ಪ್ರಕರಣದ ಎಲ್ಲಾ ನೈಜ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಬಗ್ಗೆ ಸಂಶಯವಿದೆ. ಈ ಪ್ರಕರಣದ ನೈಜ ಆರೋಪಿಗಳ ಬಂಧನ ಮತ್ತು ಸೂತ್ರಧಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ಸಂಬಂಧಿಸಿದಂತೆ ಪರಿಹಾರ ಕಾರ್ಯ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಜಿಲ್ಲಾಧಿಕಾರಿ, ಸಚಿವರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಅಥಾವುಲ್ಲಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ್, ಎಸ್‌ಡಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯದರ್ಶಿ ಹಾರಿಸ್ ಮಲಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News