ಕಾರ್ಮಿಕರು ಹೋರಾಟದ ಮೂಲಕ ಗುಲಾಮಗಿರಿಯಿಂದ ಹೊರಬನ್ನಿ: ಎಸ್. ವರಲಕ್ಷ್ಮೀ
ಮೂಡುಬಿದಿರೆ, ಮೇ 2: ನಮಗೆ ಸಮಾನತೆ ಸಿಗಬೇಕೆಂಬ ಉದ್ದೇಶದಿಂದ ಸರಕಾರಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ನಮ್ಮನ್ನಾಳುವ ಸರಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಮತ್ತೊಮ್ಮೆ ಕಾರ್ಮಿಕರನ್ನು ಗುಲಾಮಗಿರಿಯ ಸಂಕೋಲೆಯಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದು, ಕಾರ್ಮಿಕರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಗುಲಾಮಗಿರಿಯಿಂದ ಹೊರ ಬರಬೇಕಾಗಿದೆ ಎಂದು ಸಿಐಟಿಯುನ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮೀ ಕರೆ ನೀಡಿದ್ದಾರೆ.
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ವತಿಯಿಂದ ಮೂಡುಬಿದಿರೆಯ ಸಮಾಜಮಂದಿರದಲ್ಲಿ ಸೋಮವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತಂಬಾಕು ಹಾಗೂ ಬೀಡಿಯನ್ನು ನಿಷೇಧಿಸುವ ಮೂಲಕ ಸರಕಾರಗಳು ಕೋಟಿಗಟ್ಟಲೆ ಕಾರ್ಮಿಕರ ಹೊಟ್ಟೆಗೆ ಹೊಡೆಯುತ್ತಿವೆ ಹೊರತು ಪರ್ಯಾಯ ವ್ಯವಸ್ಥೆಯನ್ನು ಮಾಡಲು ಯತ್ನಿಸದೆ ಉಳ್ಳವರ ಸಂಪತ್ತನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತಿವೆ ಎಂದು ಆರೋಪಿಸಿದರು. ಶಾಂತಿಯುತವಾಗಿ ಹೋರಾಟ ಮಾಡಿದರೆ ಸರಕಾರ ಹಾಗೂ ಮಾಧ್ಯಮಗಳ ಗಮನ ಸೆಳೆಯಲು ಸಾಧ್ಯವಾಗುತ್ತಿಲ್ಲ. ಆದರೆ ಜೀವ ತೆಗೆಯುವಂತಹ ಹೋರಾಟ ಅಥವಾ ಬಸ್‌ಗಳಿಗೆ ಬೆಂಕಿ ಹಾಕಿದಾಗ ಮಾತ್ರ ಮಾಧ್ಯಮಗಳು ಆ ಸುದ್ದಿಗಳನ್ನು ಹಗಲು ರಾತ್ರಿ ಎನ್ನದೆ ಬಿತ್ತರಿಸುತ್ತವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ತಾವು ಶಾಂತಿಯುತವಾಗಿ ಸರಕಾರದ ಗಮನ ಸೆಳೆಯುವಂತೆ ಹೋರಾಟಗಳನ್ನು ಮಾಡಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳೋಣ ಎಂದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಸಿಐಟಿಯು ಮುಖಂಡೆ ರಮಣಿ, ವಲಯಾಧ್ಯಕ್ಷ ಶಂಕರ ವಾಲ್ಪಾಡಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಸುಂದರ ಶೆಟ್ಟಿ, ಗೇರು ಉದ್ಯಮ ಕಾರ್ಮಿಕರ ಸಂಘದ ಅಧ್ಯಕ್ಷೆ ಯಶೋಧಾ ಹಾಗೂ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಿಜಯಾ ಉಪಸ್ಥಿತರಿದ್ದರು.
ಸಿಐಟಿಯು ವಲಯ ಪ್ರಧಾನ ಕಾರ್ಯದರ್ಶಿ ರಾಧಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ದಾಸೋಹದ ಅಧ್ಯಕ್ಷೆ ಗಿರಿಜಾ ವಂದಿಸಿದರು.