×
Ad

ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಸಿಐಟಿಯು ಧರಣಿ

Update: 2016-05-02 19:50 IST

 ಕೊಣಾಜೆ, ಮೇ 2: ನಿವೇಶನ ರಹಿತರಿಗಾಗಿ ಮೂರು ಎಕರೆಯಷ್ಟು ಜಾಗ ಮೀಸಲಿಟ್ಟಿದ್ದರೂ ಇದುವರೆಗೂ ಫಲಾನುಭವಿಗಳಿಗೆ ಹಂಚದೇ ಅಂಬ್ಲಮೊಗರು ಗ್ರಾಪಂ ಬಡವರ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.

 ಸೋಮವಾರ ಸಿಐಟಿಯು, ಡಿವೈಎಫ್‌ಐ ಮತ್ತು ಮಿತ್ರ ಸಂಘಟನೆಗಳ ಆಶ್ರಯದಲ್ಲಿ ಅಂಬ್ಲಮೊಗರು ಪಂಚಾಯತ್ ಎದುರು ನಡೆದ ಅನಿರ್ದಿಷ್ಟಾವಧಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಸಂಘಟನೆಯ ಹೋರಾಟದ ಫಲವಾಗಿ ಮಂಗಳೂರು ನಗರದಲ್ಲಿ ಬಡ ನಿವೇಶನ ರಹಿತರಿಗೆ ಜಿ+2 ಮಾದರಿಯಲ್ಲಿ ಫ್ಲಾಟ್ ಕಟ್ಟಲು ನಿವೇಶನ ಮಂಜೂರಾಗಿದ್ದು, ಅಂಬ್ಲಮೊಗರುವಿನಂತಹ ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನವನ್ನು ಕಾದಿರಿಸಿದ್ದರೂ ಅದನ್ನು ಅರ್ಹ ಫಲಾನುಭವಿಗಳಿಗೆ ಹಂಚದಿರುವುದರ ಹಿಂದೆ ಏನೋ ಷಡ್ಯಂತ್ರವಿದೆ ಎಂದು ಆರೋಪಿಸಿದರು.

ಅಲ್ಲದೆ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಪ್ರೌಢಶಾಲೆಯ ನಿರ್ಮಾಣಕ್ಕೂ ಸರಕಾರಿ ಜಾಗ ಮಂಜೂರಾಗಿದ್ದರೂ ಕಟ್ಟಡ ಕಟ್ಟಲು ಯಾಕೆ ಮೀನ, ಮೇಷ ಎಣಿಸುತ್ತಿದ್ದೀರಿ ಎಂದು ಪಂಚಾಯತ್ ಆಡಳಿತವನ್ನು ಪ್ರಶ್ನಿಸಿದರು. ಶೀಘ್ರವೇ ಅಂಬ್ಲಮೊಗರು ಗ್ರಾಮಕ್ಕೆ ಹೆಚ್ಚುವರಿ ಸರಕಾರಿ ಬಸ್‌ಗಳನ್ನು ಹಾಕಿ ಸುಗಮ ಸಂಚಾರಕ್ಕೆ ರಸ್ತೆಗನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದರು.

ಸಿಐಟಿಯು ಉಳ್ಳಾಲ ವಲಯ ಕಾರ್ಯದರ್ಶಿ ಜಯಂತ್ ನಾಯ್ಕಾ ಮಾತನಾಡಿ, ಕೆಂಪು ಬಾವುಟಗಳ ನಿರಂತರ ಹೋರಾಟದಿಂದ ದೇಶದಲ್ಲಿ ಉಳುವವನೇ ಒಡೆಯನಾಗುವ ಭೂ ಸುಧಾರಣಾ ಕಾಯ್ದೆ ಅನುಷ್ಠಾನಗೊಂಡದ್ದು ಇತಿಹಾಸ. ಬಡವರು ತಮ್ಮ ಹಕ್ಕಿನನ್ವಯ ನಿವೇಶನವನ್ನು ಕೇಳುತ್ತಿದ್ದಾರೆ ಹೊರತು ಪಂಚಾಯತ್ ಆಡಳಿತದಿಂದ ಯಾವುದೇ ಭಿಕ್ಷೆ ಬೇಡುತ್ತಿಲ್ಲ. ಇಂತಹ ಪ್ರತಿಭಟನೆಗಳನ್ನು ಎದುರಿಸುವುದಕ್ಕಿಂತ ಕನಿಷ್ಠ 5 ಸೆಂಟ್ಸ್ ಜಾಗವನ್ನು ವಿಂಗಡಿಸಿ, ನಿವೇಶನರಹಿತರಿಗೆ ಹಂಚುವ ಕೆಲಸವನ್ನು ಪಂಚಾಯತ್ ಮಾಡಬೇಕೆಂದು ಒತ್ತಾಯಿಸಿದರು.  

ಸಿಐಟಿಯು ಉಳ್ಳಾಲ ವಲಯಾಧ್ಯಕ್ಷ ಕೃಷ್ಣಪ್ಪಸಾಲಿಯಾನ್, ಡಿವೈಎಫ್‌ಐ ಮುಖಂಡರಾದ ಜಯಂತ್ ಅಂಬ್ಲಮೊಗರು, ಇಬ್ರಾಹಿಂ ಮದಕ, ಸಲೀಂ ಮದಕ, ಸಿಐಟಿಯು ಮುಖಂಡರಾದ ಅಬ್ದುಲ್ಲತೀಫ್, ಹಂಝ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News