ಕಾರ್ಮಿಕರ ಕೆಲಸದ ಸಮಯ ಬದಲಿಸಲು ಸಚಿವ ಖಾದರ್ ಸಲಹೆ

Update: 2016-05-02 14:31 GMT

ಮಂಗಳೂರು, ಮೆ.2: ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಕೆಲಸದ ಅವಧಿಯನ್ನು ಬದಲಿಸಬೇಕು ಎಂದು ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಸಾರ್ವಜನಿಕ ಪಾರ್ಕ್‌ಗಳನ್ನು ಕಾರ್ಮಿಕರ ಹಿತದೃಷ್ಟಿಯಿಂದ ಮಧ್ಯಾಹ್ನದ ಹೊತ್ತಿನಲ್ಲಿ ತೆರೆದಿಡಬೇಕು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಬೇಕು.ಕಾರ್ಮಿಕರ ಕೆಲಸದ ಸಮಯವನ್ನು ಬೆಳಗ್ಗೆ 7ರಿಂದ ಪೂರ್ವಾಹ್ನ 11ಗಂಟೆಯವರೆಗೆ ಹಾಗೂ ಅಪರಾಹ್ನ 3ರಿಂದ ಸಂಜೆ 6ಗಂಟೆಯವರೆಗೆ ನಿಗದಿಪಡಿಸಬೇಕು. ಸರಕಾರಿ ಇಲಾಖೆಯಲ್ಲೂ ಬಿಸಿಲಿನಲ್ಲಿ ಕೆಲಸ ಮಾಡುವ ಕಡೆಗಳಲ್ಲಿ ಇದನ್ನು ಅನುಸರಿಸಬಹುದಾಗಿದೆ ಎಂದರು.

ಆರೋಗ್ಯದ ಸಮಸ್ಯೆ ಇರುವವರಿಗೆ ದೇಹದಲ್ಲಿ ನೀರಿನ ಅಂಶ ಕೊರತೆಯಾಗದಂತೆ ಎಚ್ಚರ ವಹಿಸಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಆರ್‌ಎಸ್ ಸೌಲಭ್ಯ ನೀಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಕಾರ್ಮಿಕರು ಬಿಸಿಲಿನ ತಾಪಕ್ಕೆ ಸಿಲುಕಿ ಆರೋಗ್ಯ ಸಮಸ್ಯೆ ಎದುರಿಸುವುದನ್ನು ತಪ್ಪಿಸಬಹುದು. ಹೈದರಾಬಾದ್‌ನಲ್ಲಿ ಮೇ 16ರಂದು ತಾಪಮಾನ ಹೆಚ್ಚಿರುವ ರಾಜ್ಯದ 5 ಜಿಲ್ಲೆಗಳ ಪ್ರತಿನಿಧಿಗಳ ಸಭೆ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದರು.

ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಾಜು ಕೊಟ್ಯಾನ್, ಸೈಫಾನ್ ಹಾಗೂ ಮಂಗಳೂರಿನಲ್ಲಿ ಕೊಲೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರ ಕುಟುಂಬಗಳಿಗೆ ಹಾಗೂ ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಕುಟುಂಬದವರಿಗೆ ಸರಕಾರದಿಂದ ಪರಿಹಾರ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳ್ಳಾಲ ಪ್ರಕರಣದಲ್ಲಿ ಗಾಯಗೊಂಡ ಗಾಯಾಳುಗಳನ್ನು ಭೇಟಿ ಮಾಡಲಾಗಿದೆ ಎಂದು ಹೇಳಿದರು.

ಉಳ್ಳಾಲದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಶಕ್ತಿಗಳು ಯುವಕರನ್ನು ಪ್ರಚೋದಿಸುತ್ತಿವೆ. ಮಾದಕ ದ್ರವ್ಯದ ಜಾಲ ತಡೆಯಲು, ಶಾಂತಿ ನೆಲೆಸಲು ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ದೊರೆಯುತ್ತಿದೆ ಎಂದು ಸಚಿವ ಖಾದರ್ ತಿಳಿಸಿದರು.

ಆಯುಷ್ ವೆಲ್‌ನೆಸ್ ಸೆಂಟರ್ ಆರಂಭ:-ಜಿಲ್ಲೆಯಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಆಯುಷ್ ಸೇವೆ ಎಲ್ಲರಿಗೂ ಒದಗಿಸುವ ವೆಲ್‌ನೆಸ್ ಸೆಂಟರ್ ಆರಂಭಿಸುವ ಚಿಂತನೆ ಸರಕಾರಕ್ಕಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಖಾದರ್, ಫಾರೂಕ್ ತುಂಬೆ, ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್, ಆಯುಷ್ ವಿಶೇಷ ಅಧಿಕಾರಿ ಡಾ.ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News