ಮೆಸ್ಕಾಂನ ಲೈನ್‌ಮನ್ ಹುದ್ದೆ ಶೀಘ್ರ ಭರ್ತಿ: ಪ್ರಮೋದ್

Update: 2016-05-02 14:39 GMT

ಉಡುಪಿ, ಮೇ 2: ಕಳೆದ ಸುಮಾರು 10 ವರ್ಷಗಳಿಂದ ಭರ್ತಿಯಾಗದ ಲೈನ್‌ಮ್ಯಾನ್ ಹುದ್ದೆಯನ್ನು ಭರ್ತಿ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಉಡುಪಿ ವಿಭಾಗದಲ್ಲಿ 98 ಖಾಲಿ ಹುದ್ದೆ ಖಾಲಿ ಇದ್ದು 68 ಹುದ್ದೆ ಗಳು ಶೀಘ್ರವೇ ಭರ್ತಿಯಾಗಲಿವೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಉಡುಪಿ ವೃತ್ತ, ಕಾರ್ಮಿಕರ ದಿನಾಚರಣೆಯ ಅಂಗವಾಗಿ ರವಿವಾರ ಮೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಆಯೋಜಿಸಿದ ‘ಬಾಂಧವ್ಯ’ ಕಾರ್ಮಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರಗಳು ಸಾರ್ವಜನಿಕ ಕ್ಷೇತ್ರದ ಘಟಕಗಳನ್ನುಖಾಸಗೀಕರಣಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು. ಅದೇ ರೀತಿ ಇಲ್ಲಿ ದುಡಿಯುವ ಬಡ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಹಾಗೂ ಸಣ್ಣ ಉಳಿತಾಯ ಯೋಜನೆಗಳನ್ನು ಗುರಿಯಾಗಿಸಿಕೊಂಡು ಅವರ ಬದುಕಿನೊಂದಿಗೆ ಚೆಲ್ಲಾಟವಾಡಿದರೆ ಬೆಂಗಳೂರಿನಲ್ಲಿ ಗಾರ್ಮೆಂಟ್ ಕಾರ್ಖಾನೆಗಳ ಮಹಿಳೆಯರು ನಡೆಸಿದಂಥ ಮಿಂಚಿನ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದವರು ಹೇಳಿದರು. 

ಎಷ್ಟೇ ಕೆಲಸ ಮಾಡಿದರೂ ಪ್ರಶಂಸೆ ಬಾರದ, ವಿದ್ಯುತ್ ಹೋದ ಕೂಡಲೇ ಶಾಪಗಳನ್ನು ತಿನ್ನಬೇಕಾದ ಕೆಲಸವೇ ಮೆಸ್ಕಾಂನದ್ದು. ರಾತ್ರಿ ಹಗಲೆನ್ನದೆ, ಮಳೆ ಬಿಸಿಲೆನ್ನದೆ ಕೆಲಸ ಮಾಡಬೇಕಾಗುತ್ತದೆ. ತಾಂತ್ರಿಕ ದೋಷ ಕಂಡು ಬಂದರೆ ಎಲ್ಲಿ ದೋಷವಿದೆ ಎಂದು ಪತ್ತೆ ಹಚ್ಚಿ ಸರಿಪಡಿಸಬೇಕಾಗುತ್ತದೆ. ಇದೆಲ್ಲ ಜನರಿಗೆ ಗೊತ್ತಾಗುವುದಿಲ್ಲ. ಅವರು ವಿದ್ಯುತ್ ಹೋದ ತಕ್ಷಣ ೆನ್ ಮಾಡುತ್ತಾರೆ. ಈಗಿರುವುದಕ್ಕಿಂತ ಹೆಚ್ಚು ಕೆಲಸ ಮಾಡಿ ಜನರ ಪ್ರೀತಿ ಗಳಿಸಲು ಪ್ರಯತ್ನಿಸುವುದೊಂದೆ ಉಳಿದ ದಾರಿ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಹಿಂದೆ ವಿದ್ಯುತ್ ಇಲ್ಲದ ಕಾಲದಲ್ಲಿ ಅದರ ಬಗ್ಗೆ ಜನ ಚಿಂತೆ ಮಾಡುತ್ತಿ ರಲಿಲ್ಲ. ಈಗ ವಿದ್ಯುತ್ ಇಲ್ಲದೆ ಏನೂ ಆಗುವುದಿಲ್ಲ. ನಾವು ವಿದ್ಯುತ್ ಮತ್ತು ಮೊಬೈಲ್‌ಗೆ ಅಷ್ಟೊಂದು ಒಗ್ಗಿ ಹೋಗಿದ್ದೇವೆ. ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.70ರಷ್ಟು ನೀರಿನಿಂದ ಉತ್ಪಾದಿಸಲ್ಪಡುತ್ತಿದೆ. ಈ ವರ್ಷ ಬರಗಾಲ ಬಂದಿರುವುದರಿಂದ ವಿದ್ಯುತ್ ಕೂಡಾ ಸಮಸ್ಯೆಯಾಗಿದೆ. ರಾಜ್ಯ ಸರಕಾರ ಸಾಧ್ಯವಾದಷ್ಟು ನಿರ್ವಹಣೆ ಮಾಡುತ್ತಿದೆ ಎಂದವರು ನುಡಿದರು.

ಮೆಸ್ಕಾಂನಲ್ಲಿ ವಿವಿಧ ಹುದ್ದೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ನಿವತ್ತರಾದ ಶಂಭು ದೇವಾಡಿಗ, ವೆಂಕಪ್ಪ ನಾಯ್ಕ, ಸಂಜೀವ ಗಾಣಿಗ, ಮಂಜುನಾಥ, ಜಾನ್ ಡಿಸೋಜ, ಜಗನ್ನಾಥರನ್ನು ಸನ್ಮಾನಿಸಲಾಯಿತು.

ಮೆಸ್ಕಾಂನ ಸಹಾಯಕ ಲೆಕ್ಕಾಧಿಕಾರಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಭಾಗ ಕಾರ್ಯನಿರ್ವಹಕ ಎಂಜಿನಿಯರ್ ಗಿರೀಶ್ ಕುಮಾರ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್, ಸದಾನಂದ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News