×
Ad

ಉಡುಪಿ ನಗರಸಭೆಗೆ ಶ್ರದ್ಧಾಂಜಲಿ ಅರ್ಪಣೆ!

Update: 2016-05-02 21:11 IST

 ಮಲ್ಪೆ, ಮೇ 2: ಉಡುಪಿ ನಗರಸಭೆಗೆ ಮಲ್ಪೆ ಸಮೀಪದ ನೆರ್ಗಿಯ ದಲಿತರು ಸಲ್ಲಿಸಿದ ಶೃದ್ಧಾಂಜಲಿಯ ಬ್ಯಾನರ್ ಇದು!. ಈ ಮೂಲಕ ನಗರಸಭಾ ವ್ಯಾಪ್ತಿಯ ವಡಭಾಂಡೇಶ್ವರ 2ನೆ ವಾರ್ಡಿನ ನೆರ್ಗಿ ಪ್ರದೇಶದ ದಲಿತ ನಿವಾಸಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನೆರ್ಗಿಯ ವಿದ್ಯಾದಾಯಿನಿ ಸಂಕೀರ್ಣ ಮಂದಿರದ ಬಳಿ ಹಾದುಹೋಗುವ ದಾರಿಯ ಪಕ್ಕ ಸಾರ್ವಜನಿಕರನ್ನು ಗಮನಸೆಳೆಯುವ ಈ ಫ್ಲೆಕ್ಸ್‌ನಲ್ಲಿ ದಲಿತ ಕಾಲನಿಯ ಮಧ್ಯೆ ಅವೈಜ್ಞಾನಿಕವಾಗಿ ಮತ್ತು ಕಾನೂನು ಬಾಹಿರವಾಗಿ ವಸತಿ ಸಮುಚ್ಚಯ (ಫ್ಲಾಟ್)ಕ್ಕೆ ಅನುಮತಿ ನೀಡಿರುವ ಉಡುಪಿ ನಗರಸಭೆೆಯ ಆಡಳಿತ ವರ್ಗಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಗಿದೆ.

‘ನಿಮ್ಮ ದಿವ್ಯ ಆತ್ಮಕ್ಕೆ ಚಿರಶಾಂತಿ, ಸದ್ಗತಿಯನ್ನು ಅನುಗ್ರಹಿಸಲಿ ಮತ್ತು ನಿಮ್ಮ ಕುಟುಂಬ ಸಂಸಾರಕ್ಕೆ ದು:ಖವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರತಿನಿತ್ಯ ಪ್ರಾರ್ಥಿಸುವೆವು. ದಲಿತ ನಿವಾಸಿಗಳು ನೆರ್ಗಿ’ ಎಂದು ಬರೆಯಲಾಗಿದೆ.

 ಈ ವಿನೂತನ ರೀತಿಯ ಪ್ರತಿಭಟನೆಯ ಹಿಂದೆ ದಲಿತರ ನೋವಿದೆ. ಸುಮಾರು ನೂರಕ್ಕೂ ಹೆಚ್ಚು ದಲಿತರೇ ವಾಸಿಸುವ ಈ ನೆರ್ಗಿ ಪ್ರದೇಶದಲ್ಲಿ ಜನರ ಆಕ್ಷೇಪವಿದ್ದರೂ, ಕಾಲನಿಯ ಮಧ್ಯೆ ವಸತಿ ಸಮುಚ್ಚಯಕ್ಕೆ ಉಡುಪಿ ನಗರಸಭೆ ಕಾನೂನುಬಾಹಿರವಾಗಿ ಅನುಮತಿ ನೀಡಿರುವುದೇ ಈ ರೀತಿಯ ಪ್ರತಿಭಟನೆಗೆ ಕಾರಣವಂತೆ.

ಒಳಚರಂಡಿ ವ್ಯವಸ್ಥೆಯಿಲ್ಲದೆ, ರಸ್ತೆ ಸೌಕರ್ಯವಿಲ್ಲದ ಈ ಪ್ರದೇಶದಲ್ಲಿ ಮೂರು ಅಂತಸ್ತಿನ ವಸತಿ ಸಮುಚ್ಚಯದ ಶೌಚಾಲಯಕ್ಕೆ ಹೊಂಡ ತೆಗೆದು ಫಿಟ್ ನಿರ್ಮಿಸಿದಲ್ಲಿ ದಲಿತ ಕಾಲೋನಿಯ ಸುತ್ತಮುತ್ತಲಿನ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವುದಲ್ಲದೆ, ದಲಿತರ ಸಾಮಾಜಿಕ ನೆಮ್ಮದಿಗೂ ಭಂಗ ಬರುವ ಸಾಧ್ಯತೆ ಇದೆ ಎಂಬುದು ಇವರ ಆಕ್ರೋಶ.

ಈ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಪರಸ್ಪರ ಸೌರ್ಹಾದತೆಯಿಂದ ಸಾಂಸ್ಕೃತಿಕವಾಗಿ ಬದುಕುತ್ತಿದ್ದ ಈ ಕಾಲೋನಿಯ ಮಧ್ಯೆ ವಸತಿ ಸಮುಚ್ಚಯ ನಿರ್ಮಿಸಿದರೆ ಅಶಾಂತಿಗೆ ಕಾರಣವಾಗುತ್ತದೆ. ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿರುವ ಈ ಫ್ಲಾಟ್‌ಗೆ ಈ ಭಾಗದ ದಲಿತರ ಆಕ್ಷೇಪವಿದ್ದರೂ ಉಡುಪಿ ನಗರಸಭೆಯ ಪ್ರಸಕ್ತ ಆಡಳಿತ ದಲಿತರಿಗೆ ಮಾಡಿರುವ ವಂಚನೆಯ ವಿರುದ್ಧ ಹೋರಾಟ ನಡೆಸುವುದಲ್ಲದೆ ಈ ವಸತಿ ಸಮುಚ್ಚಯಕ್ಕೆ ಅನುಮತಿ ನೀಡಿರುವ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News