×
Ad

ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್ ಕಚೇರಿವರೆಗೆ ಪಾದಯಾತ್ರೆ

Update: 2016-05-02 21:33 IST

ಮಂಗಳೂರು, ಮೇ 2: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಿ.ಬಾಳಿಗಾರ ಹತ್ಯೆ ಪ್ರಕರಣದ ತನಿಖೆಯ ವಿಳಂಬವನ್ನು ಖಂಡಿಸಿ ಹಾಗೂ ಪ್ರಕರಣದ ಆರೋಪಿಯೆನ್ನಲಾದ ‘ನಮೋ ಬ್ರಿಗೇಡ್’ನ ಸಂಸ್ಥಾಪಕ ನರೇಶ್ ಶೆಣೈ ಸಹಿತ ಎಲ್ಲಾ ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಳಿಗಾರ ಮನೆ ಸಮೀಪವಿರುವ ಕಲಾಕುಂಜ ಬಳಿಯಿಂದ ಕಮಿಷನರ್ ಕಚೇರಿವರೆಗೆ ಇಂದು ಪಾದಯಾತ್ರೆ ನಡೆಯಿತು.

 ಕಲಾಕುಂಜ ಬಳಿಯಿಂದ ಹೊರಟ ಪಾದಯಾತ್ರೆಯು ನಗರದ ಕಾರ್‌ಸ್ಟ್ರೀಟ್‌ನ ಶ್ರೀವೆಂಕಟರಮಣ ದೇವಸ್ಥಾನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕಮಿಷನರ್ ಕಚೇರಿಗೆ ಮುಂದುವರಿಯಿತು. 

‘ಬಾಳಿಗಾ ಹಂತಕರಿಗೆ ಧಿಕ್ಕಾರ’, ‘ಸುಪಾರಿ ಕಿಲ್ಲರ್ ‘ನಮೋ ಬ್ರಿಗೇಡ್’ನ ಸಂಸ್ಥಾಪಕ ನರೇಶ್ ಶೆಣೈನನ್ನು ಬಂಧಿಸಿ’, ‘ಆರೋಪಿಗಳ ಬಂಧನವಾಗದೆ ಹೋರಾಟ ನಿಲ್ಲದು’, ಮೊದಲಾದ ಘೋಷಣೆಗಳು ಮೊಳಗಿದವು.

ಕಮಿಷನರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಬಾಳಿಗಾ ಹತ್ಯೆ ಪ್ರಕರಣದ ಆರೋಪಿಯಾಗಿರುವ ನರೇಶ್ ಶೆಣೈ ವಿಚಾರದಲ್ಲಿ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಆದ್ದರಿಂದ ಬಂಧನವು ವಿಳಂಬವಾಗುತ್ತಿದೆ. ನರೇಶ್ ಶೆಣೈ ಸಹಿತ ಎಲ್ಲಾ ಆರೋಪಿಗಳ ಬಂಧನಕ್ಕೆ ನಾವು ಈ ಹಿಂದೆಯೂ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದೆವು. ಇದೀಗ ಪೊಲೀಸ್ ಇಲಾಖೆಯನ್ನು ಎಚ್ಚರಿಸುವ ಸಲುವಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಆರೋಪಿಗಳ ಬಂಧನ ವಿಳಂಬವಾದರೆ ಪ್ರತಿಭಟನೆಯನ್ನು ಬೆಂಗಳೂರಿನವರೆಗೆ ಕೊಂಡೊಯ್ಯುವುದಾಗಿ ಎಚ್ಚರಿಕೆ ನೀಡಿದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ನರೇಶ್ ಶೆಣೈಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಬಾಳಿಗಾ ಕೊಲೆ ನಡೆದು 40 ದಿನಗಳಾದರೂ ನರೇಶ್ ಶೆಣೈನನ್ನು ಬಂಧಿಸಲು ಈವರೆಗೂ ಸಾಧ್ಯವಾಗದಿರುವುದಕ್ಕೆ ಪೊಲೀಸ್ ಇಲಾಖೆಗೆ ನಾಚಿಕೆಯಾಗಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಕಾರ್‌ಸ್ಟ್ರೀಟ್‌ನ ಶ್ರೀ ವೆಂಕರಮಣ ದೇವಸ್ಥಾನದ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಾಳಿಗಾರ ಸಹೋದರಿಯರಾದ ಉಷಾ ಶೆಣೈ ಹಾಗೂ ಅನುರಾಧಾ, ಸಹೋದರನ ಹಂತಕರ ಶೀಘ್ರ ಬಂಧನವಾಗಲಿ. ಹಂತಕರನ್ನು ದೇವರೇ ಶಿಕ್ಷಿಸಲಿ ಎಂದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಮುಖಂಡೆ ವಿದ್ಯಾ ದಿನಕರ್, ಡಿಎಸ್‌ಎಸ್ (ಪ್ರೊ.ಕೃಷ್ಣಪ್ಪ ಸ್ಥಾಪಿತ)ನ ರಾಜ್ಯ ಹಿರಿಯ ಮುಖಂಡ ಎಂ.ದೇವದಾಸ್, ಕಾರ್ಪೊರೇಟರ್ ಹಾಗೂ ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಎಐವೈಎಫ್‌ನ ಕರುಣಾಕರ, ಎಸ್‌ಎಫ್‌ಐನ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಬಾಳಿಗಾರ ತಂದೆ ರಾಮಚಂದ್ರ ಬಾಳಿಗಾ, ತಾಯಿ ಜಯಂತಿ ಬಾಳಿಗಾ, ಸಹೋದರಿಯರಾದ ಉಷಾ ಶೆಣೈ, ಹರ್ಷ ಬಾಳಿಗಾ, ಅನುರಾಧಾ ಬಾಳಿಗಾ, ಸ್ನೇಹಿತ ಗಣೇಶ್ ಬಾಳಿಗಾ, ರೆನ್ನಿ ಡಿಸೋಜಾ, ಪಿ.ವಿ.ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.

 ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಎಸ್‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ಶರಣ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News