ಆಪ್‌ಗೆ ವಿದಾಯ ಹೇಳಿದ ಸ್ಥಾಪಕ ಸದಸ್ಯ ಆಝ್ಮಿ
Update: 2016-05-02 22:32 IST
ಹೊಸದಿಲ್ಲಿ,ಮೇ 2: ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರ ‘ನಿರಂಕುಶ ಕಾರ್ಯ ಶೈಲಿ’ ಮತ್ತು ‘ಆಂತರಿಕ ಪ್ರಜಾಪ್ರಭುತ್ವದ ಕೊರತೆ’ಯಿಂದಾಗಿ ಬೇಸತ್ತ ಪಕ್ಷದ ಸ್ಥಾಪಕ ಸದಸ್ಯ ಇಲ್ಯಾಸ್ ಆಝ್ಮಿ ಅವರು ಸೋಮವಾರ ಪಕ್ಷವನ್ನು ತೊರೆದಿದ್ದಾರೆ. ಕೇಜ್ರಿವಾಲ್ ಅವರು ಮುಸ್ಲಿಮರನ್ನು ಹಾಗೂ ಹಿಂದುಳಿದ ವರ್ಗಗಳ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಮತ್ತು ಜಾತಿ ಆಧಾರಿತ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆಝ್ಮಿ ಆರೋಪಿಸಿದ್ದಾರೆ.
ಆಪ್‌ನಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಇಲ್ಲವೆಂದೇ ಹೇಳಬಹುದು. ಕೇಜ್ರಿವಾಲ್ ಸರಕಾರದ ಮುಖ್ಯ ಹುದ್ದೆಗಳಲ್ಲಿ ತನ್ನ ಸಮುದಾಯದವರನ್ನೇ ನೇಮಿಸುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆಂದು ವರದಿಯು ತಿಳಿಸಿದೆ.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಮಾಜಿ ಆಪ್ ಸದಸ್ಯರಾದ ಯೋಗೇಂದ್ರ ಯಾದವ ಮತ್ತು ಪ್ರಶಾಂತ ಭೂಷಣ ಅವರ ಉಚ್ಚಾಟನೆಗೆ ತನ್ನ ವಿರೋಧವಿದೆ ಎಂದು ಆಝ್ಮಿ ತಿಳಿಸಿದ್ದಾರೆ.