ಚುಟುಕು ಸುದ್ದಿಗಳು

Update: 2016-05-02 17:54 GMT


ಇನ್ನಂಜೆ: ಬ್ರಹ್ಮಕಲಶೋತ್ಸವ
 ಉಡುಪಿ, ಮೇ 2: ಇನ್ನಂಜೆಯ ಮಡುಂಬು ಶ್ರೀಭದ್ರಕಾಳಿ ಅಮ್ಮನವರ ದೇವಸ್ಥಾನಕ್ಕೆ ನೂತನ ರಥ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದೊಂದಿಗೆ ಶ್ರೀಮನ್ಮಹಾರಥೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಮೇ 2ರಿಂದ 5ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತದಾರರಾದ ಯಶೋಧರ ಎಲ್. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 5ರಂದು ಬೆಳಗ್ಗೆ 8:45ಕ್ಕೆ ರಥವನ್ನು ದೇವರಿಗೆ ಸಮರ್ಪಿಸಲಾಗುವುದು. ಶ್ರೀಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.


ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆ
ಪುತ್ತೂರು, ಮೇ 2: ಎಪಿಎಂಸಿ ಪ್ರಾಂಗಣದಲ್ಲಿ ರೈತರಿಗಾಗಿ ನಿರ್ಮಾಣಗೊಂಡ ಸಭಾಭವನದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಜೊತೆಗೆ ಎಪಿಎಂಸಿ ಪ್ರವೇಶ ದ್ವಾರ, ಪ್ರಾಂಗಣಕ್ಕೆ ಡಾಮರೀಕರಣ ಪೂರ್ಣಗೊಂಡಿದೆ. 2.5 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಎಪಿಎಂಸಿ ಸಚಿವರು ಉದ್ಘಾಟಿಸಬೇಕೆಂಬ ನಿಟ್ಟಿನಲ್ಲಿ ಜೂನ್ ತಿಂಗಳ ಪ್ರಥಮ ವಾರದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಅಧ್ಯಕ್ಷ ಕೃಷ್ಣ ಶೆಟ್ಟಿಯ ಅಧ್ಯಕ್ಷತೆಯಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.


2015-16ನೆ ಸಾಲಿನ ಆದಾಯದ ಮೇಲೆ ಶೇ.10 ರಷ್ಟು ಮೊತ್ತವನ್ನು ಅಡಮಾನ ಸಾಲ ಉಳಿತಾಯ ಖಾತೆಗೆ ವರ್ಗಾಯಿಸುವ, ಅಡಮಾನ ಸಾಲ ಹುಟ್ಟುವಳಿಗಳ ಇನ್ಸೂರೆನ್ಸ್‌ನ್ನು ಮುಂದಿನ ಒಂದು ವರ್ಷದ ಅವಧಿಗೆ ನವೀಕರಿಸುವ ಹಾಗೂ ಕಚೇರಿ ಉಪಯೋಗಕ್ಕೆ 10 ಕೆ.ವಿ. ಜನರೇಟರ್ ಖರೀದಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಪಾಧ್ಯಕ್ಷ ಕರುಣಾಕರ ಎಲಿಯ, ನಿರ್ದೇಶಕರಾದ ಪಿ.ಸೀತಾರಾಮ ಗೌಡ, ಗುರುನಾಥ ಗೌಡ ಪಿ.ಎನ್, ಯಶೋಧರ ಕೆ. ಗೌಡ, ಪ್ರಮೋದ್ ಕೆ.ಎಸ್, ತ್ರಿವೇಣಿ, ಕರುಣಾಕರ ಪೆರ್ವೋಡಿ, ಡಿ. ಸೋಮನಾಥ, ಅಬ್ದುಲ್ ಶಕೂರ್ ವಿ.ಎಚ್, ನಾಮನಿರ್ದೇಶಿತ ಸದಸ್ಯ ಎ.ಮಾಣಿಕ್ಯರಾಜ್ ಪಡಿವಾಳ್, ಮಹೇಶ್ ರೈ ಅಂಕೋತ್ತಿಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಲೆಕ್ಕಾಧಿಕಾರಿ ರಾಮಚಂದ್ರ ಸಭೆಯ ನಡಾವಳಿ ವಾಚಿಸಿದರು. ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಎಚ್.ಕೆ.ಕೃಷ್ಣ ಮೂರ್ತಿ ಮಾಹಿತಿ ನೀಡಿದರು.


ಕೊಲ್ಲಮೊಗ್ರು: ತೋಡಿಗೆ ಬಿದ್ದು ವ್ಯಕ್ತಿ ಸಾವು
ಸುಬ್ರಹ್ಮಣ್ಯ, ಮೇ 2: ಕೊಲ್ಲಮೊಗ್ರು ಗ್ರಾಮದ ನಾಗನಕಜೆ ನಿವಾಸಿ ಕೃಷ್ಣಪ್ಪಗೌಡ(55) ಎಂಬವರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
 
ಶನಿವಾರ ಬೆಳಗ್ಗೆ ಕೆಲಸಕ್ಕೆಂದು ಹೋದವರು ಸಂಜೆ ಕೆಲಸ ಮುಗಿಸಿ ಮರಳಿ ಮನೆಗೆ ಬಂದಿದ್ದರು. ಹಾಗೆಯೇ ಅಂಗಡಿಗೆ ಹೋಗಿ ಬರುವುದಾಗಿ ಪತ್ನಿಯ ಬಳಿ ಹೇಳಿ ಹೋಗಿದ್ದರು. ತಡರಾತ್ರಿ ತನಕವೂ ಅವರು ವಾಪಸ್ ಬಂದಿರಲಿಲ್ಲ. ಮರುದಿನ ಬೆಳಗ್ಗೆ ಪಕ್ಕದ ಮನೆಯ ರಾಜೀವಿ ರೈ ಎಂಬವರು ತೋಡಿನ ಬಳಿ ತೆರಳಿದ ವೇಳೆ ಅಲ್ಲಿ ಕೃಷ್ಣಪ್ಪರ ಮೃತದೇಹ ಕಂಡುಬಂದಿದೆ. ಕೈಕಾಲು ತೊಳೆಯಲೆಂದು ತೋಡಿನ ನೀರಿಗೆ ಇಳಿದ ಸಂದರ್ಭ ಆಕಸ್ಮಾತ್ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಸುಬ್ರಹ್ಮಣ್ಯ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

ಸುಳ್ಯ: ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯ
ಸುಳ್ಯ, ಮೇ 2: ಸುಳ್ಯ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ವಿಶೇಷ ಅನುದಾನ ಒದಗಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದಾರೆ.
ಬರದ ಪರಿಸ್ಥಿತಿಯಿಂದ ಸುಳ್ಯ ತಾಲೂಕಿನ ಬಹುತೇಕ ಅಡಿಕೆ ತೋಟಗಳು ಒಣಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರ್ವೇ ನಡೆಸಿ ಪರಿಹಾರ ನೀಡಬೇಕೆಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.


ಕಾಲುಸಂಕದಿಂದ ಬಿದ್ದು ಸಾವು
ಸುಬ್ರಹ್ಮಣ್ಯ, ಮೇ 2: ಎಡಮಂಗಲ ಗ್ರಾಮದ ಚಾಲ್ತಾರು ಮನೆ ನಿವಾಸಿ ಕರಿಯಪ್ಪ(58) ಎಂಬವರು ಕಾಲುಸಂಕದಿಂದ ಬಿದ್ದು ಮೃತಪಟ್ಟ ಘಟನೆ ರವಿವಾರ ನಡೆದಿದೆ.
 
ರಾತ್ರಿ ವೇಳೆ ನೀರು ಹಾಯಿಸಲೆಂದು ಅವರು ತೋಟಕ್ಕೆ ತೆರಳಿದ್ದರು. ತಡರಾತ್ರಿ ತನಕವೂ ಅವರು ವಾಪಸ್ ಆಗಿರಲಿಲ್ಲ. ಈ ಬಗ್ಗೆ ಆತಂಕಗೊಂಡ ಮನೆಯವರು ರಾತ್ರಿಯೇ ತೋಟದ ಕಡೆ ತೆರಳಿ ಹುಡುಕಾಟ ನಡೆಸಿದಾಗ ತೋಟದ ಮಧ್ಯೆ ಇರುವ ತೋಡಿಗೆ ಅಡ್ಡಲಾಗಿ ಕಟ್ಟಿರುವ ಕಾಲು ಸಂಕದ ಕೆಳಗೆ ನರಳಾಡುತ್ತಿದ್ದುದು ಗಮನಕ್ಕೆ ಬಂದಿದೆ. ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು. ಘಟನೆ ಸಂಬಂಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಢಿಕ್ಕಿ


ಬೆಳ್ತಂಗಡಿ, ಮೇ 2: ಗುರುವಾಯನಕೆರೆ ಸಮೀಪ ಮದ್ದಡ್ಕ ಎಂಬಲ್ಲಿನ ರಾ.ಹೆ.ಯಲ್ಲಿ ಸೋಮವಾರ ಸಂಜೆ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಪಯ್ಯಿಟ್ಟು ನಿವಾಸಿ ಗಣೇಶ್ (24) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಚಾರ್ಮಾಡಿ ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಲಾರಿಯ ಚಕ್ರದಡಿಗೆ ಸಿಲುಕಿದ್ದು, ಚಾಲಕ ಗಣೇಶ್ ಕೂಡಾ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಣೇಶ್ ಪೈಂಟರ್ ಕೆಲಸ ಮಾಡುತ್ತಿದ್ದು ಮನೆಯಿಂದ ಪೇಟೆ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋಟಾರು ಸೈಕಲ್ ಕಳವು
 ಕಾಪು, ಮೇ2: ಕಟಪಾಡಿ ಮೂಡಬೆಟ್ಟು ಗ್ರಾಮದ ಪೋಸಾರು ನಾಗೇಶ್‌ರ ಬಾಡಿಗೆ ಮನೆಯ ಎದುರು ರಸ್ತೆ ಬದಿಯಲ್ಲಿ ಎ.30ರ ರಾತ್ರಿ 11 ಗಂಟೆಗೆ ನಿಲ್ಲಿಸಿದ್ದ ರಾಯಲ್ ಎನ್‌ಫಿಲ್ಡ್ ಬುಲೆಟ್ ರವಿವಾರ ಬೆಳಗ್ಗೆ 8 ಗಂಟೆಗೆ ನೋಡುವಾಗ ಕಳವಾದ ಬಗ್ಗೆ ಹರ್ಷದ್ ಎಂಬವರು ಕಾಪು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳವಾದ ಬುಲೆಟ್‌ನ ವೌಲ್ಯ 1.55 ಲಕ್ಷ ರೂ.ಎಂದು ಹೇಳಲಾಗಿದೆ.


ನೀರಲ್ಲಿ ಮುಳುಗಿ ಮೃತ್ಯು
ಕೋಟ, ಮೇ 2: ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ರತ್ನಾಕರ ಶೆಟ್ಟಿ ಎಂಬವರಿಗೆ ಸೇರಿದ ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದ ರಮೇಶ್ (45) ಎಂಬವರು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ರಮೇಶ್ ವಿಪರೀತ ಮದ್ಯಪಾನ ಮಾಡಿ ಕೋರೆಯಲ್ಲಿದ್ದ ನೀರಿನ ಹೊಂಡದಲ್ಲಿ ಮುಖ ತೊಳೆಯಲು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರು ಢಿಕ್ಕಿ
 ಬೆಳ್ತಂಗಡಿ, ಮೇ 2: ನಗರದ ಪೆಟ್ರೋಲ್ ಪಂಪ್ ಬಳಿ ಅಂಬಾಸಿಡರ್ ಕಾರೊಂದು ಚಾಲಕನ ಅಜಾಗರೂಕತೆಯಿಂದ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಬೈಕ್ ಸವಾರ ಪದ್ಮನಾಭ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News