ಅನುಮತಿ ನೀಡಲು ಒತ್ತಾಯಿಸಿ ಅಜ್ಜಾವರ ಗ್ರಾಪಂಗೆ ಮುತ್ತಿಗೆ
ಸುಳ್ಯ, ಮೇ 2: ಸಂಘ ಪರಿವಾರದ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ಮೇ.15ರಂದು ಮೇನಾಲ ಮೈದಾನದಲ್ಲಿ ಸದ್ಭಾವನಾ ಸಂಗಮ ಹೆಸರಿನಡಿ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಕಾರ್ಯಕ್ರಮ ನಡೆಸಲು ಅಜ್ಜಾವರ ಗ್ರಾಪಂ ಅನುಮತಿ ನಿರಾಕರಣೆಯ ವಿರುದ್ಧ ಸಂಘಟನೆಗಳ ಕಾರ್ಯಕರ್ತರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಬೋಧ್ ಶೆಟ್ಟಿ ಮೇನಾಲ, ವಿವಾದಿತ ಮೇನಾಲದ ಮೈದಾ ಎಲ್ಲರ ಕಾರ್ಯಕ್ರಮಕ್ಕಾಗಿ ಮುಕ್ತವಾಗಿದೆ ಎಂದು ಇತ್ತೀಚೆಗಷ್ಟೆ ಸಹಾಯಕ ಕಮಿಷನರ್ ಸಂದರ್ಭದಲ್ಲಿ ಹೇಳಿದ್ದಾರೆ. ಕಾರ್ಯಕ್ರಮ ನಡೆಸಲು ಅಜ್ಜಾವರ ಗ್ರಾಪಂ ಒಪ್ಪಿಗೆ ನೀಡಿಲ್ಲ. ಪಂಚಾಯತ್ ಹಿಂದೂ ವಿರೋಧಿ ನೀತಿಯ ಮೂಲಕ ಆಡಳಿತ ನಡೆಸುತ್ತಿದೆ. ಕೂಡಲೇ ಪಂಚಾಯತ್ ಹಿಂದೂ ವಿರೋಧಿ ನೀತಿಯನ್ನು ಕೈ ಬಿಡಬೇಕು. ಕೇವಲ ಒಂದು ವರ್ಗವನ್ನು ತೃಪ್ತಿ ಪಡಿಸಲು ಪಂಚಾಯತ್ ಆಡಳಿತ ಕಸರತ್ತು ನಡೆಸುತ್ತಿದೆ. ಪಂಚಾಯತ್ ಸಭೆೆಯಲ್ಲಿ ನಿರ್ಣಯ ಮಾಡಿ ಸಮಾರಂಭಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಅದೇ ಮೈದಾನದ ಸ್ಥಳದಲ್ಲಿ ನಾವು ಕಾರ್ಯಕ್ರಮ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹಿಂದೂ ಸಂಘಟನೆಯ ಮುಖಂಡ ರಾಜೇಶ್ ರೈ ಮೇನಾಲ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಗ್ರಾಪಂನ ಆಡಳಿತ ಹಿಂದೂ ಸಮಾಜೋತ್ಸವ ನಡೆಸಲು ಸೌಜನ್ಯದಿಂದ ಅನುಮತಿ ನೀಡಬೇಕು. ಅನುಮತಿ ನೀಡದಿದ್ದರೂ ನಾವು ಕಾರ್ಯಕ್ರಮ ಮಾಡಿಯೇ ಸಿದ್ದ. ಅನುಮತಿ ನೀಡದಿದ್ದರೆ ಮೇನಾಲದ ಮೈದಾನವನ್ನು ಹಿಂದೂ ಸಂಘಟನೆಗಳು ಸ್ವಾಧೀನಕ್ಕೆ ಪಡೆದುಕೊಂಡು ಅಲ್ಲಿ ನಿತ್ಯ ಸಂಘದ ಚಟುವಟಿಕೆಗಳನ್ನು ಮಾಡುತ್ತೇವೆ ಎಂದರು.
ಪಂಚಾಯತ್ ಸೂಕ್ತ ನಿರ್ಣಯ ತೆಗೆದುಕೊಳ್ಳುವವರೆಗೂ ನಾವು ಪಂಚಾಯತ್ ಬಿಟ್ಟು ಕದಲುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.
ಬಳಿಕ ಪಂಚಾಯತ್ ಕಾರ್ಯದರ್ಶಿ ಮತ್ತು ಪಂಚಾಯತ್ ಅಧ್ಯಕ್ಷ ಪ್ರಸಾದ್ ರೈ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಮೇಲೆ ಪಕ್ಷ, ಜಾತಿಯನ್ನು ನೋಡದೆ ಆಡಳಿತ ನಡೆಸಿದ್ದೇವೆ. ಮೇನಾಲದ ಮೈದಾನದಲ್ಲಿ ಹಿಂದೂ ಸಮಾವೇಶ ನಡೆಸಲು ಕೆಲವರಿಂದ ವಿರೋಧ ಬಂದ ಕಾರಣ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅನುಮತಿ ನಿರಾಕರಣೆಗೆ ನಿರ್ಣಯ ಆಗಿದೆ. ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲರಿಗೂ ಅವಕಾಶ ಇದೆ ಎಂದು ಸಹಾಯಕ ಕಮೀಷನರ್ ಅವರ ಮಧ್ಯೆಸ್ಥಿಕೆಯಲ್ಲಿ ತೀರ್ಮಾನ ಆಗಿತ್ತು. ಆದರೆ ಎಸಿ ಅವರ ಆದೇಶದ ಪ್ರತಿ ಪಂಚಾಯತ್‌ಗೆ ಬಂದಿಲ್ಲ. ನಾಳೆ ಪಂಚಾಯತ್ ತುರ್ತು ಸಾಮಾನ್ಯ ಸಭೆಯನ್ನು ಕರೆದು ಚರ್ಚಿಸಿ ಕಾರ್ಯಕ್ರಮಕ್ಕೆ ಅನುಮತಿ ನೀಡುವುದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಚನಿಯ ಕತ್ಲಡ್ಕ, ಸೊಸೈಟಿ ಅಧ್ಯಕ್ಷ ಶಿವಪ್ರಸಾದ್, ವೆಂಕಟ್ರಮಣ ಮುಳ್ಯ, ಚಂದ್ರಶೇಖರ್ ಅತ್ಯಾಡಿ, ಮಾಜಿ ಗ್ರಾಪಂ ಅಧ್ಯಕ್ಷೆ ಜಯಂತಿ, ವೆಂಕಟ್ರಮಣ ಅತ್ಯಾಡಿ, ಲತೀಶ್ ಗುಂಡ್ಯ, ಗ್ರಾಪಂ ಸದಸ್ಯ ಕಮಲಾಕ್ಷ ರೈ ಮೊದಲಾದವರು ಉಪಸ್ಥಿತರಿದ್ದರು.