×
Ad

ಮಂಗಳೂರು: ಮುಗಿಲು ಮುಟ್ಟುತ್ತಿದೆ ನೀರಿನ ಹಾಹಾಕಾರ !

Update: 2016-05-03 15:01 IST

ಮಂಗಳೂರು, ಮೇ 3: ಕಡಲ ತಡಿಯ ನಗರವೆಂದೇ ಕರೆಯಲಾಗುವ ಮಂಗಳೂರಿನಲ್ಲಿ ನೀರಿನ ಸಮಸ್ಯೆ ತಾರಕಕ್ಕೇರುತ್ತಿದ್ದು, ನಗರದ ಪ್ರಮುಖ ವಿದ್ಯಾ ಸಂಸ್ಥೆಗಳಿಂದ ನಡೆಸಲ್ಪಡುವ ಹಾಸ್ಟೆಲ್‌ಗಳಿಂದ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಬಹುತೇಕ ಕಾಲೇಜು ಹಾಸ್ಟೆಲ್‌ಗಳು ತುಂಬೆ ಅಣೆಕಟ್ಟಿನಿಂದ ಸರಬರಾಜಾಗುವ ನೀರನ್ನೇ ಅವಲಂಬಿಸಿವೆ. ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನೇ ದಿನೇ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸುಮಾರು ಎರಡು ವಾರಗಳಿಂದ ಎರಡು ದಿನಗಳಿಗೊಮ್ಮೆ ಕೆಲ ಗಂಟೆಗಳ ಕಾಲ ಮಾತ್ರವೇ ನೀರು ಸರಬರಾಜಾಗುತ್ತಿದೆ. ಏಕಕಾಲದಲ್ಲಿ ಎಲ್ಲಾ ಕಡೆಗಳಿಗೂ ನೀರು ಪೂರೈಕೆಯಾಗುವುದರಿಂದ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಯುವುದರಿಂದ ಬೃಹತ್ ನೀರಿನ ಟ್ಯಾಂಕ್‌ಗಳು, ಸಂಪುಗಳು ತುಂಬಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಂಬಂಧಪಟ್ಟ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿ ರಜೆ ನೀಡಿ ಮನೆಗೆ ಕಳುಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸ್ಟೆಲ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು ದುಸ್ಥರ ಮಾತ್ರವಲ್ಲ, ಅದರಿಂದ ಅಲರ್ಜಿಯಾಗುವ ಸಾಧ್ಯತೆಗಳೂ ಇರುವುದರಿಂದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಸಂಬಂಧಪಟ್ಟ ಸಂಸ್ಥೆಗಳು ನಿರ್ಧರಿಸಿವೆ.

ನಗರದ ಫಾದರ್ ಮುಲ್ಲರ್ ಮೆಡಿಕೆಲ್ ಕಾಲೇಜು ಹಾಸ್ಟೆಲ್‌ಗಳಲ್ಲಿರುವ ಸುಮಾರು ಶೇ. 75ರಷ್ಟು ವಿದ್ಯಾರ್ಥಿಗಳು ಈಗಾಗಲೇ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದೇ ವೇಳೆ ನಗರದ ಕೆಎಂಸಿ ಕಾಲೇಜಿನ ಎಂಬಿಬಿಎಸ್ ವಿಭಾಗದ ದ್ವಿತೀಯ ಮತ್ತು ತೃತೀಯ ವರ್ಷದ 400 ಮಂದಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಿಂದ ಮೇ 15ರವರೆಗೆ ರಜೆ ನೀಡಿ ಕಳುಹಿಸಲಾಗಿದೆ. 

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ 8 ಹಾಸ್ಟೆಲ್‌ಗಳಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ವಿಭಾಗದ ಸುಮಾರು 2500ರಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಶೇ. 75ರಷ್ಟು ವಿದ್ಯಾರ್ಥಿಗಳನ್ನು ಈಗಾಗಲೇ ಮನೆಗೆ ಕಳುಹಿಸಲಾಗಿದೆ.

ತುಂಬೆ ಅಣೆಕಟ್ಟಿನಲ್ಲಿ 5.8 ಅಡಿ ಮಾತ್ರ ನೀರು!

ತುಂಬೆ ಅಣೆಕಟ್ಟಿನಲ್ಲಿ ಮಂಗಳವಾರ 5.8 ಅಡಿಗಳಷ್ಟು ಮಾತ್ರವೇ ನೀರಿದೆ. ಸುಮಾರು 3.5 ಅಡಿಗಳವರೆಗೆ ಮಾತ್ರವೇ ನೀರನ್ನು ಎತ್ತಬಹುದಾಗಿದೆ. ಪ್ರಸ್ತುತ ಇರುವ ನೀರು ನಗರಕ್ಕೆ ಸುಮಾರು ನಾಲ್ಕೈದು ದಿನಗಳಿಗೆ ಮಾತ್ರ ಸರಬರಾಜು ಮಾಡಬಹುದು.
 

72 ಕಿ.ಮೀ.ನಿಂದ ತುಂಬೆಗೆ ನೀರು ಹರಿಯುವುದೇ?

ತುಂಬೆ ಅಣೆಕಟ್ಟಿನಲ್ಲಿ ನೀರು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಪುತ್ತೂರು ಕಡಬ ಹೋಬಳಿಯ ಕೋಲಿಯಾಡ ಕಟ್ಟ ಎಂಬಲ್ಲಿನ ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ನೀರು ಹರಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆದೇಶಿಸಿದ್ದಾರೆ.

ಅದರ ಪ್ರಕಾರ ಸೋಮವಾರ ಸಂಜೆಯಿಂದಲೇ ಪಾಲಿಕೆಯ ಸುಮಾರು 40ರಷ್ಟು ಸಿಬ್ಬಂದಿಗಳು ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿನುದ್ದಕ್ಕೂ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಇದೇ ವೇಳೆ, ಎಂಆರ್‌ಪಿಎಲ್ ಅಣೆಕಟ್ಟಿನಿಂದ ನೀರು ಬಿಡಲಾಗಿದ್ದು, ಸ್ವಲ್ಪ ಪ್ರಮಾಣದ ನೀರು ಇದೀಗ ಎಎಂಆರ್ ಡ್ಯಾಂನಲ್ಲಿ ಸಂಗ್ರಹವಾಗಿದೆ. ದಿಶಾ ಪವರ್ ಪ್ರಾಜೆಕ್ಟ್ ಅಣೆಕಟ್ಟಿನಿಂದ ಬಿಡಲಾಗುವ ನೀರು ಕುಮಾರಧಾನ ನದಿ ಮೂಲಕ ಉಪ್ಪಿನಂಗಡಿ ನೀರು ಸರಬರಾಜು ಅಣೆಕಟ್ಟು ಅಲ್ಲಿಂದ ಎಆರ್‌ಪಿಎಲ್ ಅಣೆಕಟ್ಟು ದಾಟಿ ಎಎಂಆರ್ ಅಣೆಕಟ್ಟಿಗೆ ತಲುಪಿ ಬಳಿಕ ತುಂಬೆ ಡ್ಯಾಂಗೆ ಹರಿಯಬೇಕಿದೆ. ಸುಮಾರು 72 ಕಿ.ಮೀ.ನಷ್ಟು ದೂರದಿಂದ ನೀರು ತಲುಪಲು ಕನಿಷ್ಠ ಎರಡು ಮೂರು ದಿನಗಳಾದರೂ ಬೇಕು. ಅದೂ ನೀರಿನ ಹರಿವು ಕ್ಷಿಣವಾಗಿದ್ದಲ್ಲಿ ಅಷ್ಟು ದೂರದಿಂದ ತುಂಬೆ ಅಣೆಕಟ್ಟಿನವರೆಗೆ ತಲುಪಬಹುದೇ ಎಂಬ ಅನುಮಾನವೂ ಇದೆ. ಒಟ್ಟಿನಲ್ಲಿ ನೀರಿಗಾಗಿ ಕೊನೆಯ ಕ್ಷಣದಲ್ಲಿ ಎಚ್ಚೆತ್ತ ಅಧಿಕಾರಿಗಳ ನಿರ್ಧಾರದಿಂದ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆಯೇ ಎಂಬುದು ಈಗಿರುವ ಪ್ರಶ್ನೆ.

ಈ ನಡುವೆ ಮಳೆಯೊಂದೇ ನೀರಿನ ಸಮಸ್ಯೆಗೆ ಪರಿಹಾರವಾಗಿದ್ದು, ಮಳೆಗಾಗಿ ದೇವರಿಗೆ ಮೊರೆ ಇಡುವ ಕಾರ್ಯ ಎಲ್ಲೆಡೆಯಿಂದಲೂ ನಡೆಯುತ್ತಿದೆ.
 

ಒಂದೆಡೆ ಬಿಸಿಲ ಧಗೆ ಇನ್ನೊಂದೆಡೆ ನೀರಿಗಾಗಿ ಪರದಾಟ!

ಬಜಾಲ್, ಜಪ್ಪಿನಮೊಗರು, ಸುರತ್ಕಲ್, ಪಾಂಡೇಶ್ವರ, ಬಂದರು ಮೊದಲಾದ ಪ್ರದೇಶಗಳಲ್ಲಿ ಸಾರ್ವಜನಿಕರ ನೀರಿಗಾಗಿನ ಪರದಾಟ ನಿಲ್ಲದಾಗಿದೆ. ಎರಡು ದಿನಗಳಿಗೊಮ್ಮೆ ಸರಬರಾಜಾಗುವ ನೀರು ನಗರದ ಬಹುತೇಕ ವಾರ್ಡ್‌ಗಳಿಗೆ ತಲುಪತ್ತಲೇ ಇಲ್ಲ ಎಂಬ ಕೂಗು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
‘‘ನಾವು ಕಳೆದ ಕೆಲ ವರ್ಷಗಳಿಂದ ಈ ರೀತಿಯ ನೀರಿನ ಸಮಸ್ಯೆ ಎದುರಿಸಿಲ್ಲ. ಎರಡು ದಿನಗಳಿಗೊಮ್ಮೆ ಬರುವ ನೀರು ನಮ್ಮ ಮನೆಯ ಟ್ಯಾಂಕ್‌ಗೆ ತಲುಪುವುದೇ ಇಲ್ಲ. ಹೊರಗಿನ ಪೈಪ್‌ನಿಂದ ಕೆಲ ಕೊಡಗಳಷ್ಟು ಮಾತ್ರವೇ ನೀರು ಸಿಗುತ್ತದೆ. ಅದನ್ನೆಲ್ಲಾ ಮನೆಯಲ್ಲಿರುವ ಸಣ್ಣ ಪುಟ್ಟ ಪಾತ್ರೆಗಳಲ್ಲೆಲ್ಲಾ ತುಂಬಿಸಿಡುತ್ತೇವೆ. ಆದರೆ ಅದು ಒಂದು ದಿನಕ್ಕೂ ಸಾಕಾಗುವುದಿಲ್ಲ. ಮನೆಯಲ್ಲಿ 10 ಮಂದಿ ಇದ್ದೇವೆ. ಸ್ನಾನ, ಬಟ್ಟೆ ಮಾಡುವುದು ಬಿಡಿ, ಕುಡಿಯಲು, ಅನ್ನ ಬೇಯಿಸಲೂ ನೀರು ಸಾಕಾಗುತ್ತಿಲ್ಲ’’ ಎನ್ನುತ್ತಾರೆ ಬಜಾಲ್ ಗ್ರಾಮದ ಗೃಹಿಣಿ ದಯಾವತಿ.

ಮನೆಗಳ ಬಾವಿ ನೀರು ತಳ ಹಿಡಿಯುತ್ತಿದೆ!

ತುಂಬೆ ಅಣೆಕಟ್ಟಿನ ಸಮೀಪವೇ ನಮ್ಮ ಮನೆ ಇರುವುದು. ತುಂಬೆ ಅಣೆಕಟ್ಟಿನಲ್ಲಿರುವ ನೀರಿನಿಂದಾಗಿ ನಮ್ಮದು ಸೇರಿದಂತೆ ಅಕ್ಕಪಕ್ಕದ ಮನೆಗಳ ಬಾವಿಗಳಲ್ಲಿ ನೀರು ಇರುತ್ತಿತ್ತು. ಆದರೆ ಇದೀಗ ತುಂಬೆ ಅಣೆಕಟ್ಟಿನಲ್ಲಿ ನೀರು ಕಡಿಮೆಯಾಗಿರುವುದರಿಂದ ಬಾವಿ ನೀರು ಕಡಿಮೆಯಾಗುತ್ತಿದೆ. ತುಂಬೆ ಅಣೆಕಟ್ಟಿನ ನೀರು ತಳ ಹಿಡಿದರೆ ನಮ್ಮ ಬಾವಿಯ ನೀರು ಖಾಲಿಯಾಗುವ ಆತಂಕ ನಮ್ಮನ್ನು ಕಾಡುತ್ತಿದೆ’’ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯಲಕ್ಷ್ಮಿ.

ಸ್ನಾನ, ಬಟ್ಟೆ ಒಗೆಯುವುದು ಕನಸಿನ ಮಾತಾಗುತ್ತಿದೆ!

ನಗರದಲ್ಲಿ ಎಲ್ಲರ ಬಾಯಲ್ಲೂ ನೀರಿನ ಸಮಸ್ಯೆಯದ್ದೇ ಮಾತು. ನಳ್ಳಿ ನೀರನ್ನೇ ಅವಲಂಬಿಸಿರುವವರು ನೀರಿಲ್ಲದೆ ಅಕ್ಕಪಕ್ಕದ ಮನೆಗಳು ಅಥವಾ ಸಾರ್ವಜನಿಕ ಬಾವಿಗಳಲ್ಲಿ ನೀರಿಗಾಗಿ ಅಲೆದಾಡುತ್ತಿದ್ದರೆ, ಹಾಸ್ಟೆಲ್‌ಗಳಲ್ಲಿರುವ ಉದ್ಯೋಗಸ್ಥರು, ಸಾರ್ವನಿಕ ನಳ್ಳಿ ನೀರನ್ನೇ ಅವಲಂಬಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ.

‘‘ನಮ್ಮ ಪಿಜಿಯಲ್ಲಿ ನಳ್ಳಿ ನೀರು ಬರುವುದಿಲ್ಲ. ನಾವು ಪಕ್ಕದ ಪಿಜಿಯ ಬಾವಿಯಿಂದ ದಿನಕ್ಕೊಂದು ಸಣ್ಣ ಬಕೆಟ್‌ನಲ್ಲಿ ನೀರು ತಂದು ಅದರಲ್ಲಿ ಸ್ನಾನ ಮಾಡುವ ಪರಿಸ್ಥಿತಿ ಇದೆ. ಆ ಬಾವಿಯಲ್ಲೂ ನೀರು ತಳದಲ್ಲಿದೆ. ಅದರಲ್ಲಿಯೂ ಖಾಲಿಯಾದರೆ ಏನು ಮಾಡುವುದು ಅರ್ಥವಾಗುತ್ತಿಲ್ಲ. ಸ್ನಾನಕ್ಕೇ ನೀರು ಸಾಕಾಗುವುದಿಲ್ಲ. ಇನ್ನು ಬಟ್ಟೆ ಒಗೆಯುವುದು ಕನಸಿನ ಮಾತಾಗಿದೆ’’ ಎಂಬುದು ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಕಟ್ಟಡವೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿರುವ ಖಾಸಗಿ ಮಹಿಳಾ ಉದ್ಯೋಗಿಯೊಬ್ಬರ ಅಭಿಪ್ರಾಯ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News