×
Ad

ಸಾರ್ವಜನಿಕ ಕೆರೆ ಬಾವಿಗಳ ಪುನಶ್ಚೇತನಕ್ಕೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ

Update: 2016-05-03 17:33 IST

ಉಪ್ಪಿನಂಗಡಿ, ಮೇ 3: ಸಾರ್ವಜನಿಕ ಕೆರೆ, ಬಾವಿಗಳನ್ನು ಪುನಶ್ಚೇತನಗೊಳಿಸಲು ಸರಕಾರಕ್ಕೆ ಪತ್ರ ಬರೆಯಲು ನಿರ್ಧಾರ, ತ್ಯಾಜ್ಯ ಶುಲ್ಕ ಪರಿಷ್ಕರಣೆ ವಾಣಿಜ್ಯ ಕಟ್ಟಡ ತೆರಿಗೆ ಪರಿಷ್ಕರಣೆ, ಸೇರಿದಂತೆ ಹಲವು ಮಹತ್ವ ನಿರ್ಣಯಗಳನ್ನು ಉಪ್ಪಿನಂಗಡಿ ಗ್ರಾಪಂನ ಗ್ರಾಮ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅಧ್ಯಕ್ಷತೆಯಲ್ಲಿ ಇಲ್ಲಿನ ಗಾಂಧಿಪಾರ್ಕ್‌ನಲ್ಲಿ ಮಂಗಳವಾರ ನಡೆದ ಉಪ್ಪಿನಂಗಡಿ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಾಮಾಜಿಕ ಕಾರ್ಯಕರ್ತ ಜಯಂತ ಪೊರೋಳಿ, ಪೇಟೆಯಲ್ಲಿರುವ ಕೆಲವು ವಸತಿ, ವಾಣಿಜ್ಯ ಕೇಂದ್ರಗಳ ಮಲೀನ ನೀರನ್ನು ಪೈಪ್‌ಗಳ ಮೂಲಕ ಸಂಪರ್ಕ ಕಲ್ಪಿಸಿ ನೇರ ನದಿಗೆ ಬಿಡಲಾಗಿದೆ. ಇದರಿಂದ ನದಿ ಮಲೀನವಾಗುತ್ತಿದೆ. ಆದ್ದರಿಂದ ತಕ್ಷಣ ಇಂತಹವರಿಗೆ ನೋಟಿಸ್ ನೀಡಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಪಂಚಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ನೇತ್ರಾವತಿ ಹಾಗೂ ಕುಮಾರಧಾರ ನದಿಯಲ್ಲಿ ನೀರ ಹರಿವು ಕಡಿಮೆಯಿದ್ದು, ನಿಂತ ನೀರಿನಲ್ಲಿ ಕೆಲವರು ವಾಹನ ತೊಳೆಯುವುದು, ದನಕರುಗಳನ್ನು ತೊಳೆಯುವುದನ್ನು ಮಾಡುತ್ತಿರುತ್ತಾರೆ. ಇದಲ್ಲದೆ, ಕೆಲವರು ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ನದಿಗೆ ಎಸೆಯುತ್ತಿರುವುದು ಕಂಡು ಬರುತ್ತದೆ. ಹೀಗಾದಾಗ ನದಿಗಳು ಮಲೀನಗೊಂಡು ಇದರ ನೀರು ಕುಡಿಯುವವರಿಗೆ ಸಾಂಕ್ರಾಮಿಕ ರೋಗಗಳು ಬಾಧಿಸುವ ಸಾಧ್ಯತೆ ಇದೆ. ಆದ್ದರಿಂದ ಇದಕ್ಕೆ ಕಾರಣರಾಗುವವರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಮ್ಮ ಗ್ರಾಮದಲ್ಲಿ ಸಾಕಷ್ಟು ಮರಳಿದ್ದರೂ, ಇಲ್ಲಿನವರಿಗೆ ಮರಳು ಸಿಗುತ್ತಿಲ್ಲ. ಆದರೆ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಗೆ ಅಕ್ರಮ ದಂಧೆಯ ಮೂಲಕ ದಿನಕ್ಕೆ 300 ಲೋಡ್‌ನಷ್ಟು ಮರಳು ಸಾಗಾಟವಾಗುತ್ತಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಮರಳಿನ ಹಕ್ಕನ್ನು ಆಯಾ ವ್ಯಾಪ್ತಿಯ ಗ್ರಾಪಂಗೆ ನೀಡಬೇಕೆಂದು ಗ್ರಾಮಸ್ಥರು, ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು.

ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಉಪ್ಪಿನಂಗಡಿಯಲ್ಲೂ ನೀರಿನ ಸಮಸ್ಯೆ ತಲೆದೋರಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡುವುದು ಪಂಚಾಯತ್‌ನ ಮೊದಲ ಆದ್ಯತೆಯಾಗಿದೆ. ಆ ಬಳಿಕ ನೀರು ಉಳಿದರೆ ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರು ನೀಡುವುದು. ಆದ್ದರಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಉಯ ನದಿಗಳಿಗೆ ಅಳವಡಿಸಿರುವ ಕೃಷಿ ಪಂಪ್ ಶೆಡ್‌ಗಳನ್ನು ತಕ್ಷಣದಿಂದ ತೆರಮಗೊಳಿಸುವ ನಿರ್ಣಯ ಕೈಗೊಳ್ಳುವುದು ಅತಿ ಅಗತ್ಯ ಎಂದರು. ಇದನ್ನು ಗ್ರಾಮಸ್ಥರು ಕೂಡಾ ಬೆಂಬಲಿಸಿದಾಗ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸಬೆ ನಡೆಯುತ್ತಿದ್ದಾಗಲೇ ಸುಮಾರು 10-15 ಮರಳು ಲಾರಿಗಳು ಬೆಂಗಳೂರು ಕಡೆಗೆ ಸಾಗಿದ್ದನ್ನು ಕಂಡ ಗ್ರಾಮಸ್ಥರು, ನಾವು ನಮ್ಮ ಅಗತ್ಯಕ್ಕಾಗಿ ಪಿಕ್‌ಅಪ್‌ನಲ್ಲಿ ಮರಳು ಸಾಗಿಸಿದರೆ ಪೊಲೀಸರು ತಡೆದು ನಿಲ್ಲಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಹೆದ್ದಾರಿಯಲ್ಲಿ ರಾಜಾರೋಷವಾಗಿ ಇಷ್ಟೊಂದು ಮರಳು ಸಾಗಾಟವಾಗುತ್ತಿದ್ದರೂ, ಪೊಲೀಸರು ಅದನ್ನು ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸಭೆಯಲ್ಲಿದ್ದ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬೇಟೆಯಾಡಲು ಹೋದ ತಂಡದ ಮೇಲೆ ಉಪ್ಪಿನಂಗಡಿಯಲ್ಲಿರುವ ಪ್ರೊಬೆಷನರಿ ಎಎಸ್ಪಿದರೋಡೆಗೆ ಸಂಚು ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಸಭೆಯಲ್ಲಿ ಗ್ರಾಮಸ್ಥ ಹಾಜಿ ಮುಸ್ತಾಫ ಕೆಂಪಿ, ಮುಹಮ್ಮದ್ ತೌಸೀಫ್, ಮುಸ್ತಾಫ ಆರೋಪಿಸಿದರಲ್ಲದೆ, ಅವರಲ್ಲಿ ಮೆಣಸಿನ ಹುಡಿ ಹಾಗೂ ಮಂಕಿ ಕ್ಯಾಪ್ ಇರದಿದ್ದರೂ, ಅದನ್ನು ಪೊಲೀಸರೇ ತಂದು ಈ ಪ್ರಕರಣದಲ್ಲಿ ಅವರನ್ನು ಫಿಕ್ಸ್ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ಇದರ ಸತ್ಯಾಸತ್ಯತೆಗೆ ಕಾನತ್ತೂರಿಗೆ ಅಥವಾ ಧರ್ಮಸ್ಥಳಕ್ಕೆ ಎಎಸ್ಪಿ ಪ್ರಮಾಣಕ್ಕೆ ಬರಲಿ ಎಂದು ಸಭೆೆಯಲ್ಲಿ ಒತ್ತಾಯಿಸಿದರು.

 ಪಟಾಕಿ ದಾಸ್ತಾನಿಗೆ ಹಾಗೂ ಮಾರಾಟಕ್ಕೆ ಪರವಾನಿಗೆ ನೀಡುವಾಗ ಬಯಲು ಪ್ರದೇಶದಲ್ಲಿ ಇದರ ದಾಸ್ತಾನು ಹಾಗೂ ಮಾರಾಟ ನಡೆಸಬೇಕೆಂದು ಸ್ಪಷ್ಟ ನಿಯಮವಿದೆ. ಆದರೆ, ಉಪ್ಪಿನಂಗಡಿಯಲ್ಲಿ ಈ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಲ್ಲಿನ ಜನಸಂದಣಿ ಇರುವ ಪೇಟೆಯಲ್ಲಿ ಕೆಲವು ಅಂಗಡಿಗಳಲ್ಲಿ ಅನಧಿಕೃತವಾಗಿ ಪಟಾಕಿ ದಾಸ್ತಾನು, ಮಾರಾಟ ನಡೆಯುತ್ತಿದೆ. ಇತರ ಉತ್ಪನ್ನಗಳ ಮಾರಾಟದೊಟ್ಟಿಗೆ ಪಟಾಕಿಗಳ ಮಾರಾಟ ನಡೆಸಲಾಗುತ್ತಿದ್ದು, ಇಲ್ಲಿ ಅನಾಹುತವೇನಾದರೂ ನಡೆದರೆ, ಇಡೀ ಪೇಟೆಯೇ ಸುಟ್ಟು ಬೂದಿಯಾಗುವ ಸಂಭವವಿದೆ. ಆದ್ದರಿಂದ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸುವುದು ಬೇಡ. ಅನಧಿಕೃತವಾಗಿ ಪಟಾಕಿ ಮಾರುವವರ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಸಾಮಾಜಿಕ ಕಾರ್ಯಕರ್ತ ಜಯಂತ ಪೊರೋಳಿ ಆಗ್ರಹಿಸಿದರು.

ಸಭೆಯಲ್ಲಿ ಗ್ರಾಮಸ್ಥರಾದ ಉಮೇಶ್ ಶೆಣೈ, ಹಾಜಿ ಮುಸ್ತಾಫ ಕೆಂಪಿ, ಅಚ್ಯುತ ಪಡಿಯಾರ್, ಅಝೀಝ್ ನಿನ್ನಿಕಲ್, ರಾಜಗೋಪಾಲ್ ಭಟ್ ಕೈಲಾರ್, ಜಗದೀಶ್ ಶೆಣೈ, ಬಾಲ ಸುಬ್ರಹ್ಮಣ್ಯ ಆರ್ತಿಲ, ಸಿದ್ದೀಕ್ ಕೆಂಪಿ, ಆದಂ ಮಠ, ಮಹೇಶ್ ನಾಯಕ್, ಅಬ್ಬಾಸ್ ಕೊರಂಬಾಡಿ, ಮುಸ್ತಾಪ, ಲಕ್ಷ್ಮಣ ಮತ್ತಿತರರು ಚರ್ಚೆಯಲ್ಲಿ ಬಾಗವಹಿಸಿದರು. ತಾಪಂ ಸದಸ್ಯೆ ಸುಜಾತ ಆಚಾರ್ಯ, ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಹೇಮಲತಾ, ಸದಸ್ಯರಾದ ಚಂದ್ರಾವತಿ, ವಿನಾಯಕ ಪೈ, ಮುಹಮ್ಮದ್ ತೌಸೀಫ್, ಗೋಪಾಲ ಹೆಗ್ಡೆ, ಕವಿತಾ, ಸುಂದರಿ ಕೆ., ಭಾರತಿ, ಚಂದ್ರಾವತಿ, ಯು.ಕೆ. ಇಬ್ರಾಹೀಂ, ಯೋಗಿನಿ, ಸುರೇಶ್ ಅತ್ರೆಮಜಲು, ಸುಶೀಲಾ, ಜಮೀಳಾ, ಉಮೇಶ್ ಗೌಡ ಉಪಸ್ಥಿತರಿದ್ದರು.

ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ಸಭೆಗೆ ಮಾಹಿತಿ ನೀಡಿದರು.

ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ವರದಿ ವಾಚಿಸಿದರು. ಪಶು ವೈದ್ಯಾಧಿಕಾರಿ ಡಾ. ರಾಮ್ ಪ್ರಕಾಶ್ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News