ನಾಗರಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅಧರ್ಮದ ವಿರುದ್ಧ ಧರ್ಮಯುದ್ಧ: ಅನಂತರಾಮ ಬಂಗಾಡಿ
ಬೆಳ್ತಂಗಡಿ, ಮೇ 3: ನಾಗರಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಾವು ಅಧರ್ಮದ ವಿರುದ್ಧ ಧರ್ಮ ಯುದ್ಧ ಮಾಡುತ್ತಿದ್ದೇವೆ. ಇದರಲ್ಲಿ ಹಂತ ಹಂತವಾಗಿ ಯಶಸ್ಸು ಪಡೆಯುತ್ತಿದ್ದೇವೆ ಈ ಹೋರಾಟದಿಂದ ಸಮಾಜಕ್ಕೆ, ದೀನ ದಲಿತರಿಗೆ ಹೆಚ್ಚು ಉಪಕಾರವಾಗುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸ ಅನಂತರಾಮ ಬಂಗಾಡಿ ಹೇಳಿದ್ದಾರೆ.
ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಎನ್‌ಎಸ್‌ಟಿ -40 ಸಂಭ್ರಮದ ಅಂಗವಾಗಿ ನಡೆದ ಬದಲಾದ ಸಾಮಾಜಿಕ-ರಾಜಕೀಯ- ಶೈಕ್ಷಣಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಚಟುವಟಿಕೆಗಳನ್ನು ಪುನರ್ ರೂಪಿಸುವಿಕೆ ಕುರಿತ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಟ್ರ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಮಾತನಾಡಿ, ಶೋಷಣೆ-ಅನ್ಯಾಯದ ವಿರುದ್ಧ ಮಾಡುವ ಈ ಹೋರಾಟಕ್ಕೆ ಜಂಟಿ ಕ್ರಿಯಾ ಸಮಿತಿ, ಪ್ರಜಾಧಿಕಾರ ವೇದಿಕೆ ಕರ್ನಾಟಕ, ವಿವಿಧ ರಾಷ್ಟ್ರೀಯ ಸಂಘಟನೆಗಳು ಬೆಂಬಲ ನೀಡುತ್ತಿವೆ. ಶಂಪಾ ದೈತೋಟ, ಆರ್.ಎನ್.ಭಿಡೆಯವರಂತಹ ಹಲವರು ಹಿರಿಯರು ಈ ಟ್ರಸ್ಟ್‌ನ ಬೆಳವಣಿಗೆಗೆ ಬೆನ್ನೆಲುಬಾಗಿದ್ದರು. ಅವರು ಹಾಕಿಕೊಟ್ಟ ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮಗಳ ಮಾರ್ಗದಲ್ಲಿ ಮುಂದುವರಿಯೋಣ. ಇಡೀ ಸಮಾಜವೇ ಇಂದು ಜಾಗೃತಗೊಂಡಿದ್ದು ದೌರ್ಜನ್ಯ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ದಿನ ದೂರವಿಲ್ಲ ಎಂದರು. ನಮ್ಮ ಎಲ್ಲಾ ಹೋರಾಟಗಳೂ ಕಾನೂನುಬದ್ಧವಾಗಿವೆ. ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ರಂಜನ್ ರಾವ್ ಯರ್ಡೂರ್ ಇದರಲ್ಲಿ ಸಂಪೂರ್ಣ ತೊಡಗಿದ್ದಾರೆ ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಪ್ರಸಿದ್ಧ ವಕೀಲರು ಸಹಕರಿಸುತ್ತಿದ್ದಾರೆ ಎಂದರು.
ಆಗಸ್ಟ್ ಅಂತ್ಯದಲ್ಲಿ ರಾಜ್ಯ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಮಾಲೋಚನಾ ಸಭೆ ಹಾಗೂ ಡಿಸೆಂಬರ್ ಅಥವಾ ಜನವರಿ 2017ರಲ್ಲಿ ಟ್ರಸ್ಟ್ ಬಳಗದ ಸರ್ವಸದಸ್ಯರ, ಹಿತೈಷಿಗಳ ಬೃಹತ್ ಸಮಾವೇಶವನ್ನು ಏರ್ಪಡಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಟ್ರಸ್ಟ್‌ನ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ಸ್ವಾಗತಿಸಿದರು. ಟ್ರಸ್ಟಿ, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ನಾರಾಯಣ ಕಿಲಂಗೋಡಿ ಚಿಂತನೆಗಾಗಿ ಸಿದ್ಧಪಡಿಸಿದ ಟಿಪ್ಪಣಿಯನ್ನು ಓದಿದರು. ಟ್ರಸ್ಟಿ ಕೆ.ಸೋಮ ವಂದಿಸಿದರು.