ಪ್ರೊಬೆಷನರಿ ಎಎಸ್ಪಿ ಧರ್ಮಸ್ಥಳ, ಕಾನತ್ತೂರಿಗೆ ಬಂದು ಪ್ರಮಾಣ ಮಾಡಲಿ: ಮುಸ್ತಫಾ ಕೆಂಪಿ
ಉಪ್ಪಿನಂಗಡಿ, ಮೇ 3: ಬೇಟೆಯಾಡಲು ಹೋದ ತಂಡದ ಮೇಲೆ ಉಪ್ಪಿನಂಗಡಿಯಲ್ಲಿರುವ ಪ್ರೊಬೆಷನರಿ ಎಎಸ್ಪಿದರೋಡೆಗೆ ಸಂಚು ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
ಪೊಲೀಸರು ಬಂಧಿತರನ್ನು ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದು, ಇದರ ಸತ್ಯಾಸತ್ಯತೆಗೆ ಕಾನತ್ತೂರಿಗೆ ಅಥವಾ ಧರ್ಮಸ್ಥಳಕ್ಕೆ ಎಎಸ್ಪಿ ಪ್ರಮಾಣಕ್ಕೆ ಬರಲಿ ಎಂದು ಉಪ್ಪಿನಂಗಡಿ ಗ್ರಾಮಸ್ಥ ಹಾಜಿ ಮುಸ್ತಾಫ ಕೆಂಪಿ, ಮುಹಮ್ಮದ್ ತೌಸೀಫ್, ಮುಸ್ತಫಾ ಆಗ್ರಹಿಸಿದ್ದಾರೆ.
ಉಪ್ಪಿನಂಗಡಿ ಗ್ರಾಮಸಭೆಯಲ್ಲಿಂದು ಈ ಬಗ್ಗೆ ಮಾತನಾಡಿದ ಅವರು, ಆಯುಧಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ, ನೆಲ್ಯಾಡಿ ಕಡೆಯಿಂದ ಗುಂಡ್ಯ ಕಡೆಗೆ ಕ್ವಾಲಿಸ್ ವಾಹನದಲ್ಲಿ ಬರುತ್ತಿದ್ದ ಕಾಂತಡ್ಕ ನಿವಾಸಿ ಅಬ್ದುರ್ರಹ್ಮಾನ್ (34), ಉಪ್ಪಿನಂಗಡಿ ಗ್ರಾಮದ ಕೋಟೆ ನಿವಾಸಿ ಮುಹಮ್ಮದ್ ಕಬೀರ್ (51), ವಿಟ್ಲ ಗ್ರಾಮದ ಒಕ್ಕೆತ್ತೂರು ನಿವಾಸಿ ಅಬೂಬಕ್ಕರ್ (60), ವಿಟ್ಲ ಗ್ರಾಮದ ಕಾಂತಡ್ಕ ನಿವಾಸಿ ಅದ್ರಾಮ (42), ಇಳಂತಿಲ ಗ್ರಾಮದ ಕಡವಿನ ಬಾಗಿಲು ನಿವಾಸಿ ಅಬ್ದುಲ್ ಖಾದರ್ (42) ಎಂಬವರನ್ನು ಗುಂಡ್ಯ ಚೆಕ್ ಪಾಯಿಂಟ್ ಬಳಿ ಎ.12ರಂದು ಪೊಲೀಸರು ಬಂಧಿಸಿದ್ದರು.
ಬಂಧಿತರ ಬಳಿ ಮೆಣಸಿನ ಹುಡಿ ಹಾಗೂ ಮಂಕಿ ಕ್ಯಾಪ್ ಇರದಿದ್ದರೂ, ಅದನ್ನು ಪೊಲೀಸರೇ ತಂದು ಈ ಪ್ರಕರಣದಲ್ಲಿ ಬಂಧಿತರನ್ನು ಫಿಕ್ಸ್ ಮಾಡಿದ್ದಾರೆ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಬಂಧಿತರನ್ನು ಸಿಲುಕಿಸಲಾಗಿದ್ದು, ಈ ಬಗ್ಗೆ ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ಪ್ರೊಬೆಷನರಿ ಎಎಸ್ಪಿ ಕಾನತ್ತೂರಿಗೆ ಅಥವಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಒತ್ತಾಯಿಸಿದರು.