ಬೆಳ್ತಂಗಡಿ: ಭಾರೀ ಮಳೆ, ಗಾಳಿಯಿಂದಾಗಿ ಹಲವೆಡೆ ಹಾನಿ
ಬೆಳ್ತಂಗಡಿ, ಮೇ 3: ಜನರ ಬದುಕನ್ನು ದುಸ್ತರಗೊಳಿಸಿದ್ದ ಉರಿ ಬಿಸಿಲಿನಿಂದ ಒಂದಿಷ್ಟು ನೆಮ್ಮದಿ ನೀಡಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆಯ ವೇಳೆ ಗಾಳಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದೆ. ಆದರೆ ಮಳೆ ಕೆಲವೇ ಪ್ರದೇಶಕ್ಕೆ ಸೀಮಿತವಾಗಿದ್ದು ಉಳಿದೆಡೆ ಜನರನ್ನು ನಿರಾಸೆಗೊಳಿಸಿದೆ.
ತಾಲೂಕಿನ ಕೊಕ್ಕಡ, ಧರ್ಮಸ್ಥಳ, ನಿಡ್ಲೆ, ಅರಸಿನಮಕ್ಕಿ, ರೆಖ್ಯ, ಉಜಿರೆ, ಬೆಳ್ತಂಗಡಿ, ಗುರಿಪಳ್ಳ, ಮುಂಡಾಜೆ, ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದೆ.
ರೆಖ್ಯಾ ಗ್ರಾಮದ ಹಲವು ಕಡೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಗೆ ಹಲವು ಮನೆಗಳ, ಕೊಟ್ಟಿಗೆಗಳ ಚಾವಣಿಗೆ ಹಾನಿಯಾಗಿದೆ. ರೆಖ್ಯ ನಡುಬೈಲು ನಾರಾಯಣ ಗೌಡ ಎಂಜಿರ ಎಂಬವರ ಮನೆಯ ಹಂಚು ಮತ್ತು ಶೀಟುಗಳು ಪೂರ್ತಿ ಹಾರಿ ಹೋಗಿವೆ. ಸಂಪಿಗೆತ್ತಡಿಯ ಗಿರೀಶ ಬಂಗೇರರ ದನದ ಹಟ್ಟಿಯ ಮಾಡು, ಜಾನಿ ಎಂಜಿರರ ಮನೆಯ ಶೀಟ್‌ಗಳು, ತುಳಸಿದಾಸ್‌ರ ಮನೆ ಚಾವಣಿ, ಹೊನ್ನಪ್ಪ ಗೌಡರ ದನದ ಕೊಟ್ಟಿಗೆಯ ಚಾವಣಿ, ಬಾಬು ಪಿ.ಟಿ. ಮನೆಯ ಕೊಟ್ಟಿಗೆಗೆ ಹಾನಿಯಾಗಿದೆ. ಜೊತೆಗೆ ತೆಂಗಿನ ಮರ, ಅಡಿಕೆ ಮರಗಳು ಗಾಳಿಯ ರಭಸಕ್ಕೆ ಮುರಿದುಬಿದ್ದಿವೆ. ಇನ್ನೂ ಹಲವಾರು ಕಡೆ ಈ ಮಳೆ ಗಾಳಿಗೆ ಹಾನಿಯಾದ ಬಗ್ಗೆ ವರದಿಯಾಗಿದ್ದು ವಿವರಗಳು ದೊರೆತಿಲ್ಲ.
ಮುಂಡಾಜೆ ಗ್ರಾಮದ ಪಿಲತ್ತಡ್ಕ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಸುಚಿತ್ರ ಎಂಬವರು ಗಾಯಗೊಂಡಿದ್ದಾರೆ. ಈಕೆ ಮನೆಯಲ್ಲಿ ಒಬ್ಬರೇ ಇದ್ದಾಗ ಸಿಡಿಲು ಬಡಿದಿದ್ದು, ಗಾಯಗೊಂಡ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.