ಸಮಸ್ತದ ಅಧ್ಯಕ್ಷ ಕೋಯಕುಟ್ಟಿ ಮುಸ್ಲಿಯಾರ್ ನಿಧನ

Update: 2016-05-03 18:42 GMT

ಮಂಗಳೂರು, ಮೇ 3: ಪ್ರಮುಖ ವಿದ್ವಾಂಸರೂ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ಶೈಖುನಾ ಆನಕ್ಕರ ಸಿ.ಕೋಯಕುಟ್ಟಿ ಮುಸ್ಲಿಯಾರ್(81) ಇಂದು ರಾತ್ರಿ 9.45ಕ್ಕೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರು ಕಳೆದ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು. ಮೃತರು ಪತ್ನಿ, ಐದು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಮೇ 4ರಂದು ಲುಹ್ರ್ ನಮಾಝ್ ಬಳಿಕ ಮಲಪ್ಪುರಂ ಜಿಲ್ಲೆಯ ಆನಕ್ಕರ ಮಸೀದಿ ವಠಾರದಲ್ಲಿ ನೆರವೇರಲಿದೆ.

ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ಎಕ್ಸಿಕ್ಯುಟಿವ್ ಸದಸ್ಯರೂ, ಸಮಸ್ತ ಪರೀಕ್ಷಾ ಬೋರ್ಡ್, ಜಾಮಿಅಃ ನೂರಿಯಾ ಪರೀಕ್ಷಾ ಬೋರ್ಡ್, ಸಮಸ್ತ ಪಾಲಕ್ಕಾಡ್ ಜಿಲ್ಲಾ ಅಧ್ಯಕ್ಷರೂ, ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷರೂ, ಪೊನ್ನಾಣಿ ತಾಲೂಕು ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳನ್ನು ಅವರು ಅಲಂಕರಿಸಿದ್ದರು. ಪಟ್ಟಿಕ್ಕಾಡ್ ಜಾಮಿಅಃ ನೂರಿಯಾ, ವಳಾಂಜೇರಿ ಮರ್ಕಝುತ್ತರ್‌ಬಿಯ್ಯಾತುಲ್ ಇಸ್ಲಾಮಿಯ್ಯಾ, ವಳವೂರ್ ಬಾಫಖಿ ಯತೀಂಖಾನ, ತಾನೂರು ಇಸ್ಲಾವುಲ್ ಉಲೂಂ, ದಾರುಲ್ ಹಿದಾಯ ಎಟ್ಟಪ್ಪಾಲಂ ಮುಂತಾದ ದಿನೀ ಸಂಸ್ಥೆಗಳ ಸಾರಥಿಯೂ ಹಲವಾರು ಮಹಲ್‌ಲ್ಗಳ ಖಾಝಿಯೂ ಆಗಿದ್ದರು.

1988ರಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಮುಶಾವರ ಸದಸ್ಯರಾಗಿದ್ದ ಕೋಯಕುಟ್ಟಿ ಉಸ್ತಾದರು, 2001ರಿಂದ ಉಪಾಧ್ಯಕ್ಷರಾಗಿಯೂ 2012ರಿಂದ ಕಾಳಂಬಾಡಿ ಮುಹಮ್ಮದ್ ಮುಸ್ಲಿಯಾರ್ ಅವರ ಕಾಲನಂತರ ಸಮಸ್ತದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

1934ರಲ್ಲಿ ಚೇಲಾಯಿಲ್ ಹಸೈನಾರ್ ಮತ್ತು ಕುಂಞತ್ತಿಲ್ ಆಯಿಷತ್ ಫಾತಿಮಾರ ಮಗನಾಗಿ ಜನಿಸಿದ್ದರು.

ಸಮಸ್ತದ ಮದರಸಗಳಿಗೆ ರಜೆ:

ಕೋಯಕುಟ್ಟಿ ಉಸ್ತಾದ್‌ರ ನಿಧನದ ಹಿನ್ನೆಲೆಯಲ್ಲಿ ‘ಸಮಸ್ತ’ದ ಮದರಸಗಳಿಗೆ ಇಂದು (ಬುಧವಾರ) ರಜೆ ಸಾರಲಾಗಿದೆ ಎಂದು ಜಿಲ್ಲಾ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮೊಯ್ದಿನಬ್ಬ ಹಾಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News