ಸರಕಾರದ ಸಾಧನೆಗಳನ್ನು ಜನರ ಬಳಿಗೆ ಒಯ್ಯುವಂತೆ ಬಿಜೆಪಿ ಸಂಸದರಿಗೆ ಮೋದಿ ಸೂಚನೆ

Update: 2016-05-03 17:52 GMT

ಹೊಸದಿಲ್ಲಿ, ಮೇ 3: ಕೇಂದ್ರದ ಎನ್‌ಡಿಎ ಸರಕಾರ ಎರಡು ವರ್ಷಗಳನ್ನು ಪೂರೈಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮುದ್ರಾ ಯೋಜನೆ , ಎಲ್ಪಿಜಿ ವ್ಯಾಪ್ತಿ ಹೆಚ್ಚಳ ಹಾಗೂ ಗ್ರಾಮೀಣ ವಿದ್ಯುದೀಕರಣ ಯೋಜನೆಗಳನ್ನು ತನ್ನ ಸರಕಾರದ ಮಹತ್ತ್ವದ ಸಾಧನೆಗಳೆಂದು ಪಟ್ಟಿ ಮಾಡಿದ್ದಾರೆ. ಈ ಯಶಸ್ಸುಗಳನ್ನು ಜನರ ಬಳಿಗೊಯ್ಯುವಂತೆ ಅವರು ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಸಹಿತ ಸರಕಾರದ ಹಾಗೂ ಪಕ್ಷದ ಉನ್ನತ ನಾಯಕರು ಭಾಗವಹಿಸಿದ್ದ ಸಂಸದೀಯ ಪಕ್ಷದ ಸಭೆಯಲ್ಲಿ ಸರಕಾರವು ಜನತೆಗೆ ನೀಡಿದ್ದ ವಾಗ್ದಾನವನ್ನು ಈಡೇರಿಸಿದೆಯೆಂದು ಮೋದಿ ಪ್ರತಿಪಾದಿಸಿದರು.
ವಿವಿಐಪಿ ಹೆಲಿಕಾಪ್ಟರ್ ಹಗರಣವೂ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಯಿತು. ಅದನ್ನು ರಾಜ್ಯಸಭೆಯಲ್ಲಿ ನಾಳೆ ಹಾಗೂ ಲೋಕಸಭೆಯಲ್ಲಿ ಮೇ 6ರಂದು ಚರ್ಚಿಸಲಾಗುವುದೆಂದು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ರಾಜೀವ್ ಪ್ರತಾಪ್ ರೂಡಿ ಸಭೆಯ ಬಳಿಕ ತಿಳಿಸಿದರು.
ನಿನ್ನೆ ಇಲ್ಲಿ ನಿಧನರಾದ, ಭಾರತೀಯ ಜನಸಂಘದ ಸ್ಥಾಪಕ ಬಲರಾಜ್ ಮುದೋಕ್‌ರಿಗೆ ಮೋದಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದ ರೂಡಿ, ಸರಕಾರ ಹಾಗೂ ಲೋಕಸಭಾ ಸದಸ್ಯರು ಎರಡು ವರ್ಷ ಪೂರೈಸಲಿದ್ದಾರೆಂಬುದನ್ನು ಪ್ರಧಾನಿ ಗಮನಿಸಿದ್ದಾರೆ. ಮುದ್ರಾ ಯೋಜನೆ 18 ಸಾವಿರ ಹಳ್ಳಿಗಳ ವಿದ್ಯುದೀಕರಣ, 3 ಕೋಟಿಗೂ ಹೆಚ್ಚು ಕುಟುಂಬಗಳನ್ನು ಎಲ್ಪಿಜಿ ಜಾಲಕ್ಕೆ ಸೇರಿಸುವುದು ಹಾಗೂ ಕಡಿಮೆ ಬೆಲೆಯಲ್ಲಿ ಎಲ್‌ಇಡಿ ಬಲ್ಬ್ ವಿತರಣೆ ಸರಕಾರದ ಮಹತ್ತ್ವದ ಯಶಸ್ಸುಗಳೆಂದು ಅವರು ಅಭಿಪ್ರಾಯಿಸಿದ್ದಾರೆ. ಅವುಗಳನ್ನು ಜನರ ಬಳಿಗೊಯ್ಯುವಂತೆ ಪ್ರಧಾನಿ ಸಂಸದರಿಗೆ ಸೂಚಿಸಿದ್ದಾರೆಂದು ತಿಳಿಸಿದರು.
ಮೋದಿ ಸರಕಾರ 2014ರ ಮೇ 26ರಂದು ಅಸ್ತಿತ್ವಕ್ಕೆ ಬಂದಿತ್ತು.

ಮದೋಕ್‌ರ ನಿಧನದ ಕುರಿತು ಸಂತಾಪ ವ್ಯಕ್ತಪಡಿಸಿದ ಮೋದಿ, ತಾನವರೊಂದಿಗೆ ಇತ್ತೀಚೆಗೆ ಮಾತನಾಡಿದ್ದ ಸಿದ್ಧಾಂತ ಹಾಗೂ ತತ್ತ್ವ ಶಾಸ್ತ್ರಕ್ಕೆ ಬದ್ಧತೆ ಎಂದಿನಂತೆಯೇ ಬಲವಾಗಿತ್ತು ಎಂದರು.
ಮದೋಕ್‌ರೊಂದಿಗಿನ ಒಡನಾಟವನ್ನು ಸ್ಮರಿಸಿದ ಅಡ್ವಾಣಿ ಪಕ್ಷದ ಬೆಳವಣಿಗೆಯಲ್ಲಿ ಅವರ ಕೊಡುಗೆಯೂ ಇದೆಯೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News