ಮಲಾಲಾಗೆ ನೊಬೆಲ್ ಅರ್ಹತೆಯಿಲ್ಲ: ರವಿಶಂಕರ್ ಗುರೂಜಿ
ಹೊಸದಿಲ್ಲಿ, ಮೇ 3 : ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್ ಝೈಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಅರ್ಹತೆಯಿಲ್ಲ ಎಂದು ಹೇಳಿ ಆಧ್ಯಾತ್ಮಿಕ ಗುರು ಹಾಗೂ ಆರ್ಟ್ ಆಪ್ ಲಿವಿಂಗ್ ನ ಶ್ರೀ ರವಿಶಂಕರ್ ಹಲವರ ಹುಬ್ಬೇರಿಸಿದ್ದಾರೆ. ತಾನು ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಯಾವತ್ತೂ ಪಡೆಯುವುದಿಲ್ಲ ಎಂದೂ ರವಿಶಂಕರ್ ಹೇಳಿಕೊಂಡಿದ್ದಾರೆ.
‘‘ಆ ಹುಡುಗಿ (ಮಲಾಲಾ) ನೊಬೆಲ್ ಪ್ರಶಸ್ತಿ ಪಡೆಯುವಂತಹದ್ದನ್ನು ಏನೂ ಮಾಡಿಲ್ಲ,’’ಎಂದಿರುವ ಅವರು, ‘‘ನನಗೆ ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ಪ್ರಸ್ತಾಪಿಸಲಾಗಿತ್ತು. ನಾನು ಕೇವಲ ಸೇವೆ ಸಲ್ಲಿಸಬಯಸುತ್ತೇನೆ. ಸೇವೆಗಾಗಿ ಸನ್ಮಾನ ಸ್ವೀಕರಿಸಲು ಇಚ್ಛಿಸುವುದಿಲ್ಲವಾದುದರಿಂದ ಅದನ್ನು ನಾನು ತಿರಸ್ಕರಿಸಿದ್ದೆ. ಯಾರು ಅರ್ಹರೋ ಅವರಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂದು ಬಯಸುವವನು ನಾನು. ಮಲಾಲಾಗೆ ಪ್ರಶಸ್ತಿ ನೀಡಿರುವುದಕ್ಕೆ ನಾನು ವಿರೋಧವಾಗಿದ್ದೇನೆ. ಅದರಿಂದ ಏನೂ ಪ್ರಯೋಜನವಿಲ್ಲ,’’ಎಂದವರು ಅಭಿಪ್ರಾಯ ಪಟ್ಟರು. ಮಹಾರಾಷ್ಟ್ರದ ಬರಪೀಡಿತ ಲಾತೂರಿಗೆ ಭೇಟಿ ನೀಡಿದ ರವಿಶಂಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಲಾಲ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರಲ್ಲಿ ಅತ್ಯಂತ ಕಿರಿಯವರಾಗಿದ್ದಾರೆ.