ಎಂಎನ್‌ಎಸ್‌ಕಾರ್ಯಕರ್ತರಿಂದ ಇಲಾಖೆಯ ಕಚೇರಿ ಧ್ವಂಸ
ಪುಣೆ, ಮೇ 3: ನೀರಿನ ಅಭಾವ ಎದುರಿಸುತ್ತಿರುವ ನೆರೆಯ ಪಟ್ಟಣಗಳಿಗೆ ನಗರದ ಜಲಾಶಯಗಳಿಂದ ನೀರು ಹಂಚುವುದನ್ನು ವಿರೋಧಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರಿಂದು ಇಲ್ಲಿನ ಮಹಾರಾಷ್ಟ್ರ ರಾಜ್ಯ ನೀರಾವರಿ ಇಲಾಖೆಯ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಎಂಎನ್‌ಎಸ್ ಕಾರ್ಯಕರ್ತರು ‘ಸಿಚನ್ ಭವನ್‌ನೊಳಗೆ’ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಇಂದಿನಿಂದ ದವುಂಡ್ ಹಾಗೂ ಇಂದಾಪುರ ತಾಲೂಕುಗಳಿಗೆ ಖಡಕ್‌ವಾಸ್ಲಾ ಅಣೆಕಟ್ಟಿನಿಂದ ಹಂತ ಹಂತವಾಗಿ 1 ಟಿಎಂಸಿ ನೀರು ಬಿಡುಗಡೆ ಮಾಡುವ ಪುಣೆ ಜಿಲ್ಲಾ ಉಸ್ತವಾರಿ ಸಚಿವ ಗಿರೀಶ್ ಬಾಪಟ್‌ರ ನಿರ್ಧಾರದ ವಿರುದ್ಧ ಅವರು ಘೋಷಣೆ ಕೂಗಿದರು.
ಹಠಾತ್ ಪ್ರದರ್ಶನ ನಡೆಸಿದ ಬಳಿಕ ಎಂಎನ್‌ಎಸ್ ಕಾರ್ಯಕರ್ತರು ಸ್ಥಳದಿಂದ ಕಂಬಿಕಿತ್ತರು. ಆದುದರಿಂದ ಘಟನೆಯ ಸಂಬಂಧ ಯಾರನ್ನೂ ಬಂಧಿಸಿಲ್ಲವೆಂದು ನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ನಿರ್ಧಾರದಿಂದ ಪುಣೆಗೆ ಇನ್ನಷ್ಟು ನೀರಿನ ಕಡಿತ ಉಂಟಾಗದೆಂದು ಬಾಪಟ್ ಪ್ರತಿಪಾದಿಸಿದ್ದಾರೆ. ಆದರೆ, ನಗರದ ಮೇಯರ್ ಪ್ರಶಾಂತ್ ಜಗತಾಪ್ (ಎನ್‌ಸಿಪಿ) ಈ ಕ್ರಮವನ್ನು ಟೀಕಿಸಿದ್ದಾರೆ. ನೀರು ಹಂಚಿಕೆಯ ನಿರ್ಧಾರ ಘೋಷಿಸುವ ಮೊದಲು ನಗರಾಡಳಿತದೊಂದಿಗೆ ಮಾತನಾಡಿಲ್ಲ. ಇದರಿಂದ ಪುಣೆಯಲ್ಲಿ ನೀರಿನ ಬಿಕ್ಕಟ್ಟು ತೀವ್ರಗೊಳ್ಳಬಹುದೆಂದು ಅವರು ದೂರಿದ್ದಾರೆ.