ರಸ್ತೆ ಬದಿ ಹುಚ್ಚನಂತೆ ಬಿದ್ದಿದ್ದ ಖ್ಯಾತ ಸಂಶೋಧಕ!

Update: 2016-05-03 18:15 GMT

ಮಂಗಳೂರು, ಮೇ 3: ಎರಡು ತಿಂಗಳ ಹಿಂದೆ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಜೋಸೆಫ್ ಕ್ರಾಸ್ತಾ ಅವರ ಮಡಿಲು ಸೇರಿದ್ದ, ನಗರದ ಕಂಕನಾಡಿ ಬಳಿ ರಸ್ತೆ ಪಕ್ಕದಲ್ಲಿ ಅತ್ಯಂತ ಕೊಳಕು ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಅನಾಥ ವ್ಯಕ್ತಿ ಸಂಶೋಧಕ ಎನ್ನುವುದನ್ನು ನಂಬಲು ಸಾಧ್ಯವೇ? ಹೌದು, ನಂಬಲೇಬೇಕು.

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಈ ವ್ಯಕ್ತಿಗೆ ತಾನು ಮಂಗಳೂರು ಸೇರಿದ್ದು ಹೇಗೆ ಎನ್ನುವುದೇ ಗೊತ್ತಿಲ್ಲ. ತೀರ ಅಸ್ವಸ್ಥ ಸ್ಥಿತಿಯಲ್ಲಿದ್ದ ಈ ವ್ಯಕ್ತಿಯನ್ನು ಫಾ.ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಗುಣಮುಖವಾದ ಬಳಿಕ ತನ್ನ ಆಶ್ರಮದಲ್ಲಿ ಆಶ್ರಯದೊಂದಿಗೆ ಶುಶ್ರೂಷೆ ನೀಡಿ ಪುನಃ ಮನುಷ್ಯನಾಗಿ ಮಾಡಿದ ಸಂಪೂರ್ಣ ಶ್ರೇಯಸ್ಸು ಕ್ರಾಸ್ತಾ ಅವರಿಗೇ ಸಲ್ಲಬೇಕು.

ರಾಜೇಶ ನಾರಾಯಣ ಆಂಗ್ಲೆ ಎಂಬ ಈ ವ್ಯಕ್ತಿ ಸಂಶೋಧಕನಾಗಿದ್ದು, ಕೊಲ್ಲಾಪುರ, ಔರಂಗಾಬಾದ್ ಮತ್ತು ಗೋವಾಗಳಲ್ಲಿ ಶಾಖೆಗಳನ್ನು ಹೊಂದಿರುವ ಮಿಷನ್ ಆವಿಷ್ಕಾರ ಸೆಂಟರ್‌ನ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ದಿ. ರಾಷ್ಟ್ರಪತಿ ಹಾಗೂ ಸಂಶೋಧಕ ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡಿದ್ದ ಹೆಗ್ಗಳಿಕೆಯೂ ಈ ವ್ಯಕ್ತಿಗಿದೆ. ರಾಜೇಶ್‌ಗೆ ಇಬ್ಬರು ಸೋದರಿಯರು ಮತ್ತು ಓರ್ವ ಸೋದರನಿದ್ದು, ಅವರೆಲ್ಲರೂ ವಿವಾಹಿತರಾಗಿದ್ದಾರೆ. ರಾಜೇಶ ಪೂರ್ಣ ಸರಿ ಹೋದ ಬಳಿಕ ತನ್ನ ಮನೆಯ ವಿಳಾಸವನ್ನು ನೀಡಿದ್ದು, ವಿಚಾರಿಸಿದಾಗ ಆತ ತನ್ನ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ವರ್ಷದ ಹಿಂದೆ ಅತ್ಯಂತ ಮಹತ್ವದ ಸಂಶೋಧನಾ ವಿಷಯಗಳಿದ್ದ ತನ್ನ ಲ್ಯಾಪ್‌ಟಾಪ್ ಕಳೆದು ಹೋದ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ರಾಜೇಶ ಮನೆಯಿಂದ ದೂರವಾಗಿ ಊರೂರು ಅಲೆಯುತ್ತಿದ್ದರು. ಅದು ಹೇಗೋ ಮಂಗಳೂರು ತಲುಪಿ ಕ್ರಾಸ್ತಾರ ಮಡಿಲು ಸೇರಿ ಇಂದು ಮತ್ತೆ ಹಿಂದಿನ ಸ್ಥಿತಿಗೆ ಮರಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News