ದಲಿತ ಯುವತಿಯ ಬರ್ಬರ ಅತ್ಯಾಚಾರ, ಕೊಲೆ

Update: 2016-05-03 18:17 GMT

ಕೊಚ್ಚಿನ್, ಮೇ 3: ದಲಿತ ಮಹಿಳೆಯೊಬ್ಬರ ಮೇಲೆ ಬರ್ಬರ ಅತ್ಯಾಚಾರ ಎಸಗಿ, ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ, ದೇಶಾದ್ಯಂತ ತಲ್ಲಣ ಮೂಡಿಸಿದ್ದ ದಿಲ್ಲಿ ನಿರ್ಭಯಾ ಪ್ರಕರಣವನ್ನು ಮತ್ತೆ ನೆನಪಿಸುವಂತೆ ಮಾಡಿದೆ.
ಮರಣೋತ್ತರ ಅಟಾಪ್ಸಿ ಪರೀಕ್ಷೆಯ ವರದಿ ಪ್ರಕಾರ, ಮಹಿಳೆಯರನ್ನು ಅತ್ಯಾಚಾರ ಎಸಗಿದ ಬಳಿಕ ಭೀಕರವಾಗಿ ಥಳಿಸಿ, ಹರಿತವಾದ ಆಯುಧದಿಂದ ಆಕೆಯ ಕರುಳನ್ನು ಹೊರಕ್ಕೆ ಎಳೆಯಲಾಗಿದೆ. ಸಂತ್ರಸ್ತೆಯ ದೇಹದಲ್ಲಿ 30ಕ್ಕೂ ಹೆಚ್ಚು ಗಾಯಗಳಿವೆ.
ಹಲವು ಇರಿತದ ಗಾಯಗಳಿದ್ದು, ತಲೆಯಲ್ಲಿ ಇರುವ ಆಳವಾದ ಗಾಯ ಆಕೆಯ ಸಾವಿಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ ಎಂದು ಪೆರುಂಬವೂರಿನ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಗೃಹಸಚಿವ ರಮೇಶ್ ಚೆನ್ನಿತ್ತಲ ಕೊಚ್ಚಿ ವಿಭಾಗದ ಐಜಿಗೆ ಸೂಚಿಸಿದ್ದಾರೆ. ಮೇ 16ರಂದು ನಡೆಯುವ ವಿಧಾನಸಬಾ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗುವ ಎಲ್ಲ ಸಾಧ್ಯತೆಯೂ ಇದ್ದು, ಆಡಳಿತಾರೂಢ ಯುಡಿಎಫ್‌ಗೆ ತಲೆನೋವಾಗಿದೆ.
ಈ ಭೀಕರ ಅಪರಾಧ ದೇಶಾದ್ಯಂತ ಜಾತಿ ಆಧರಿತ ದೌರ್ಜನ್ಯದ ಬಗೆಗಿನ ಚರ್ಚೆಗೂ ಕಾರಣವಾಗಿದೆ. ಗುರುವಾರ ರಾತ್ರಿ ಮಹಿಳೆ ಒಬ್ಬಳೇ ಮನೆಯಲ್ಲಿದಾಗ ಈ ಘಟನೆ ನಡೆದಿದ್ದು, ತಾಯಿಗೆ ಮರುದಿನ ಇದು ತಿಳಿದಿದೆ. ಈ ಸಂಬಂಧ ಯಾರನ್ನೂ ಬಂಧಿಸದಿರುವ ಪೊಲೀಸರ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News