×
Ad

ಪಾಕ್ ಕ್ರಿಕೆಟ್ ಕೋಚ್ ಹುದ್ದೆ: ಸ್ಟುವರ್ಟ್ ಲಾ ಮೊದಲ ಆಯ್ಕೆ

Update: 2016-05-04 14:06 IST

ಕರಾಚಿ, ಮೇ 4: ಪಾಕ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಆಸ್ಟ್ರೇಲಿಯದ ಮಾಜಿ ಆಟಗಾರ ಸ್ಟುವರ್ಟ್ ಲಾ ಮೊದಲ ಆಯ್ಕೆಯಾಗಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ದೃಢಪಡಿಸಿದೆ.

ಲಾಹೋರ್‌ನಲ್ಲಿ ಮಂಗಳವಾರ ನಡೆದ ಪಿಸಿಬಿಯ ಆಡಳಿತ ಮಂಡಳಿಯ ಸಭೆಯಲ್ಲಿ ಲಾ ಅವರನ್ನು ಮುಖ್ಯ ಕೋಚ್ ಹುದ್ದೆಗೆ ಮೊದಲ ಆಯ್ಕೆಯಾಗಿ ಪರಿಗಣಿಸಲಾಗಿದ್ದು, ದಕ್ಷಿಣ ಆಫ್ರಿಕದ ಆ್ಯಂಡಿ ಮೊಯಿಸ್ ಎರಡನೆ ಆಯ್ಕೆಯಾಗಿದ್ದಾರೆ.

ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವ ಸ್ಟುವರ್ಟ್ ಲಾ ಎ.25ಕ್ಕೆ ಮೊದಲೇ ಪಾಕ್ ಕೋಚ್ ಹುದ್ದೆಗಾಗಿ ಪಿಸಿಬಿಗೆ ಅರ್ಜಿ ಸಲ್ಲಿಸಿದ್ದರು.

ಆಸ್ಟ್ರೇಲಿಯದ ಪರ ಏಕೈಕ ಟೆಸ್ಟ್ ಹಾಗೂ 54 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಲಾ ತನ್ನ ತವರು ತಂಡವಾದ ಕ್ವೀನ್ಸ್ ಲ್ಯಾಂಡ್ ಹಾಗೂ ಇಂಗ್ಲೆಂಡ್‌ನ ಎಸ್ಸೆಕ್ಸ್ ಹಾಗೂ ಲಂಕಾಶೈರ್ ಕೌಂಟಿ ತಂಡಗಳಿಗೆ ಕೋಚ್ ನೀಡಿ ಯಶಸ್ಸು ಸಾಧಿಸಿದ್ದಾರೆ. ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳಿಗೂ ಕೋಚ್ ನೀಡಿದ ಅನುಭವ ಅವರಿಗಿದೆ.

ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನ ನೀಡಿದ ಕಾರಣ ಕಳೆದ ತಿಂಗಳು ವಕಾರ್ ಯೂನಿಸ್ ರಾಜೀನಾಮೆ ನೀಡಿದ್ದು ಪಾಕ್ ಕೋಚ್ ಹುದ್ದೆ ತೆರವಾಗಿತ್ತು. ಪಾಕಿಸ್ತಾನ ತಂಡ ಈ ಹಿಂದೆ ರಿಚರ್ಡ್ ಪೈಬಸ್, ಬಾಬ್ ವೂಲ್ಮರ್, ಜೆಫ್ ಲಾಸನ್ ಹಾಗೂ ಡೇವ್ ವಾಟ್ಮೋರ್ ಸಹಿತ ಹಲವು ವಿದೇಶಿ ಕೋಚ್‌ರನ್ನು ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News