ಉದಾಸೀನ ತೋರಿದರೆ ಶಿಸ್ತು ಕ್ರಮ - ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ರೈ ಎಚ್ಚರಿಕೆ
ಸುಳ್ಯ, ಮೇ 4: ಕುಡಿಯುವ ನೀರಿನ ಪೂರೈಕೆಗಾಗಿ ತುರ್ತ ಕಾಮಗಾರಿಗಳಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಸರ್ಕಾರ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲಾ ಟಾಸ್ಕ್‌ಫೋರ್ಸ್ ಅನುಮೋದನೆ ನೀಡಿದ ಕಾಮಗಾರಿಗಳನ್ನು ತಕ್ಷಣ ಮಾಡಬೇಕು. ಜನರಿಗೆ ನೀರಿಗೆ ಯಾವುದೇ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಉದಾಸೀನ ಮಾಡುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾತ ರೈ ಹೇಳಿದ್ದಾರೆ.
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ಕುಡಿಯುವ ನೀರಿನ ಸ್ಥಿತಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಕಾಣದಂತ ನೀರಿನ ಬರ ಈ ವರ್ಷ ಆರಂಭವಾಗಿದೆ. ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಬಂದಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದೆ ಅಲ್ಲಿ ಕೂಡಲೇ ನೀರಿನ ಯೋಜನೆ ರೂಪಿಸಬೇಕು. ನೀರು ಸಮರ್ಪಕವಾಗಿ ಜನರಿಗೆ ತಲುಪಬೇಕು. ತುರ್ತಾಗಿ ನೀರು ಪೂರೈಕೆಗೆ ಅಗತ್ಯ ಬಿದ್ದಲ್ಲಿ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಬೇಕು ಎಂದರು. ಬಳ್ಪ ಗ್ರಾಮದ ಪಾದೆ ಎಡೋಣಿ ಹಾಗೂ ಸುಬ್ರಹ್ಮಣ್ಯ ಗ್ರಾಮದ ದೇವರಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆದು ಮೂರು ತಿಂಗಳಾದರೂ ವಿದ್ಯುತ್ ಸಂಪರ್ಕ ನೀಡದೇ ಇರುವ ಪ್ರಕರಣಗಳ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಗುತ್ತಿಗೆದಾರರಿಗೆ ಬಿಲ್ ಬಾಕಿ ಆಗಿಲ್ಲ, ತಡವಾಗಿರಬಹುದು. ಈ ಕುರಿತು ಯಾವುದೇ ಗೊಂದಲ ಬೇಡ ಎಂದವರು ಹೇಳಿದರು. ಜಿಲ್ಲಾಧಿಕಾರಿ ಇಬ್ರಾಹಿಂ ಮಾತನಾಡಿ, ಪಿಡಿಒ ಮತ್ತು ಎಂಜಿನಿಯರ್‌ಗಳು ತುರ್ತು ಕುಡಿಯುವ ನೀರಿಗಾಗಿ ತಂಡಗಳನ್ನು ರಚನೆಮಾಡಿಕೊಂಡು ಚುರಿಕಿನಿಂದ ಕೆಲಸ ಮಾಡಬೇಕು. ಪ್ರತಿ ಗ್ರಾಮಗಳ ಎಲ್ಲೆಲ್ಲಿ ನೀರಿನ ಅವಶ್ಯಕತೆ ಇದೆ, ಎಲ್ಲಿ ಬೋರ್ ತೆರೆಯಬೇಕು ಎನ್ನುವುದನ್ನು ಕೂಲಂಕಶವಾಗಿ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ ಖಾಸಗಿ ಕೊಳೆವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ವಿತರಿಸುವ ಕೆಲಸ ಆಗಬೇಕು ಎಂದರು.
ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ ಆಯಾ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಉಂಟಾದಾಗ ಪಂಚಾಯಿತಿಯ ಯಾವುದೇ ಅನುದಾನವನ್ನು ಖರ್ಚು ಮಾಡಬಹುದು. ಕುಡಿಯುವ ನೀರಿಗಾಗಿ ಯಾವುದೇ ರೀತಿಯ ತೊಂದರೆ ಆಗದಂತೆ ಪಿಡಿಒ ಮತ್ತು ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಅಮರಮುಡ್ನೂರಿನಲ್ಲಿ ನೀರಿನ ಮೂಲ ಇರುವ ಕಡೆಯಲ್ಲಿ ಜಾಕ್‌ವೆಲ್ ತೆರೆದ ಹಾಗೆ ಉಳಿದ ಕಡೆಗಳಲ್ಲಿ ಈ ರೀತಿ ಮಾಡಿದರೆ ಮುಂಜಾಗೃತ ಕ್ರಮವಾಗಿ ಉತ್ತಮ. ಅಧಿಕಾರಿಗಳು ನೀರಿನ ಅವಶ್ಯಕತೆ ಇದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಾನಕಿ, ಸದಸ್ಯರುಗಳಾದ ಆಶಾತಿಮ್ಮಪ್ಪ, ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಪುಷ್ಪಾವತಿ, ತಾಲ್ಲೂಕು ಪಂ. ಸದಸ್ಯರಾದ ಅಶೋಕ್ ನೆಕ್ರಾಜೆ, ತೀರ್ಥರಾಮ ಜಾಲ್ಸೂರು, ಚನಿಯ ಕಲ್ತಡ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಆರ್. ಉಮೇಶ್, ಪ್ರಭಾರ ಉಪ ವಿಭಾಗಾಧಿಕಾರಿ ಪ್ರಮೀಳಾ, ತಹಶೀಲ್ದಾರ್ ಅನಂತಶಂಕರ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಪೂಜಾರಿ, ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರು, ಪಿಡಿಒಗಳು ಉಪಸ್ಥಿತರಿದ್ದರು.