ಮೇ 7ರಂದು ಸುಳ್ಯ ಕೆವಿಜಿ ಕಾನೂನು ಕಾಲೇಜು ಬೆಳ್ಳಿ ಹಬ್ಬ
ಸುಳ್ಯ, ಮೇ 4: ಸುಳ್ಯದ ಕೆವಿಜಿ ಕಾನೂನು ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭ ಮೇ 7ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಅರಣ್ಯ ಸಚಿವ ಬಿ.ರಮಾನಾಥ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಅಂಗಾರ, ಸುಳ್ಯದ ಸಿವಿಲ್ ನ್ಯಾಯಾಧೀಶ ಎಸ್.ಸರವಣನ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಸುಭಾಶ್ ಕೌಡಿಚಾರ್, ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಕೆವಿಜಿ ಮೆಡಿಕಲ್ ಕಾಲೇಜಿನ ರೇಡಿಯೋ ಡೈಗ್ನಾಸಿಸ್ ವಿಭಾಗದ ನಿರ್ದೇಶಕಿ ಡಾ.ಕೆ.ಸಿ.ಐಶ್ವರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ನೂತನವಾಗಿ ನಿರ್ಮಿಸಿದ ಸ್ವಂತ ಕಟ್ಟಡದಲ್ಲಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಸುಸಜ್ಜಿತ ಗ್ರಂಥಾಲಯ, ಇ-ಗ್ರಂಥಾಲಯ, ವಿಆಶಲ ಸಭಾಭವನ, ಅಣಕು ನ್ಯಾಯಾಲಯ ಕೊಠಡಿ ಅಲ್ಲದೆ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗೋಸ್ಕರ ದೃಕ್ ಶ್ರವಣ ತಂತ್ರಜ್ಞಾನದ ಕೊಠಡಿಯನ್ನು ಒದಗಿಸಲಾಗಿದೆ ಎಂದರು.
ಕ್ಯಾಂಪಸ್ ನ ಲೆಕ್ಕಪತ್ರ ಅಧಿಕಾರಿ ಧನಂಜಯ ಮದುವೆಗದ್ದೆ, ಉಪನ್ಯಾಸಕರಾದ ವೈ.ಜಯರಾಮ, ಟೀನಾ, ಕಚೇರಿ ಅಧೀಕ್ಷಕ ಹರಿಪ್ರಕಾಶ್, ಗ್ರಂಥಪಾಲಕ ವಸಂತ ಕಜ್ಜೋಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.