ಸೌದಿ ಜವಾಬ್ದಾರಿ ನಿಭಾಯಿಸದಿದ್ದರೆ ಹಜ್ ರದ್ದು: ಇರಾನ್
ಟೆಹರಾನ್, ಮೇ 4: ತನ್ನ ಹಜ್ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಸೌದಿ ಅರೇಬಿಯ ವಿಫಲವಾದರೆ, ಇರಾನ್ ತನ್ನ ವಾರ್ಷಿಕ ಹಜ್ ಯಾತ್ರೆಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಇರಾನ್‌ನ ವಿದೇಶ ಸಚಿವಾಲಯ ಹೇಳಿದೆ.
‘‘ಹಜ್ ರಾಜಕೀಯ ವಿವಾದಗಳಿಗೆ ಅತೀತವಾಗಿದೆ ಎಂದು ಸೌದಿ ಅರೇಬಿಯ ಹೇಳುತ್ತದೆ. ಆದರೆ, ಅದರ ಮಾತು ಮತ್ತು ಕೃತಿಗಳಲ್ಲಿ ಭಾರೀ ಅಂತರವಿದೆ’’ ಎಂದು ಇರಾನ್ ವಿದೇಶ ಸಚಿವ ಹುಸೈನ್ ಜಬೇರಿ-ಅನ್ಸಾರಿ ಇರಾನ್‌ನ ವಾಯುವ್ಯದ ನಗರ ತಬ್ರಿಝ್‌ನಲ್ಲಿ ಮಂಗಳವಾರ ಹೇಳಿದರು.
‘‘ಆತಿಥೇಯನಾಗಿ ಯಾತ್ರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ತನ್ನ ಜವಾಬ್ದಾರಿಯನ್ನು ಸೌದಿ ಅರೇಬಿಯ ಸರಿಯಾಗಿ ನಿಭಾಯಿಸಿದರೆ, ಹಜ್ ನಡೆಯುತ್ತದೆ. ಇಲ್ಲದಿದ್ದರೆ, ಹಜ್‌ನಲ್ಲಿ ಭಾಗವಹಿಸಲು ಇರಾನೀಯರಿಗೆ ಸಾಧ್ಯವಾಗುವುದಿಲ್ಲ’’ ಎಂದರು.
ಈ ವರ್ಷದ ಹಜ್‌ಗೆ ಸೌದಿ ಅರೇಬಿಯಕ್ಕೆ ಇರಾನ್ ಯಾತ್ರಿಕರನ್ನು ಕಳುಹಿಸುವ ವಿಷಯದಲ್ಲಿ ಆ ದೇಶ ಮತ್ತು ಇರಾನ್ ನಡುವೆ ನಡೆಯಬೇಕಾಗಿರುವ ಮಾತುಕತೆಯನ್ನು ಆ ದೇಶದ ಅಧಿಕಾರಿಗಳು ನಿರಂತರವಾಗಿ ಮುಂದೂಡುತ್ತಾ ಬಂದಿದ್ದಾರೆ ಎಂದು ಇರಾನ್‌ನ ಹಜ್ ಮತ್ತು ಯಾತ್ರಿಕರ ಸಂಘಟನೆಯ ಮುಖ್ಯಸ್ಥ ಇತ್ತೀಚೆಗೆರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.