ಭಾರತೀಯ ಅಮೆರಿಕನ್ ಮಹಿಳೆಯನ್ನು ಗುಂಡಿಟ್ಟು ಕೊಂದ ಗಂಡ
ವಾಶಿಂಗ್ಟನ್, ಮೇ 4: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ 48 ವರ್ಷದ ಭಾರತೀಯ ಅಮೆರಿಕನ್ ಮಹಿಳೆಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಸಂಬಂಧಿಸಿ ಪೊಲೀಸರು ಮಹಿಳೆಯ ಗಂಡನನ್ನು ಬಂಧಿಸಿದ್ದಾರೆ.
ಎನ್‌ಕೋರ್ ಸೆಮಿಕಂಡಕ್ಟರ್ಸ್ ಕಂಪೆನಿಯಲ್ಲಿ ‘ಟೆಕ್ನಿಕಲ್ ರಿಕ್ರೂಟರ್’ ಆಗಿದ್ದ ಸೋನಿಯಾ ನಲ್ಲನ್‌ರನ್ನು ಅಕೆಯ ಗಂಡ ಜೇಮ್ಸ್ ನಲ್ಲನ್ ಗುಂಡು ಹಾರಿಸಿ ಹತ್ಯೆ ಮಾಡಿದ ಎನ್ನಲಾಗಿದೆ. ಆರೋಪಿಯೂ ಭಾರತೀಯ ಅಮೆರಿಕನ್ ಆಗಿದ್ದಾನೆ. ಹತ್ಯೆ ಶನಿವಾರ ನಡೆದಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಸ್ಯಾನ್ ಜೋಸ್ ಪೊಲೀಸ್ ಇಲಾಖೆ ತಿಳಿಸಿದೆ. ಸೋನಿಯಾ ದಂಪತಿಗೆ 21 ಮತ್ತು 20 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಏಳು ವರ್ಷಗಳ ಹಿಂದೆ ಮನೆ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ಜೇಮ್ಸ್ ಬಿದ್ದು ಗಂಭೀರ ಗಾಯಗೊಂಡಿದ್ದನು. ಆತನಿಗೆ ಮೂರು ತಿಂಗಳವರೆಗೆ ಪ್ರಜ್ಞೆ ಬಂದಿರಲಿಲ್ಲ. ಆತನಿಗೆ ಪ್ರಜ್ಞೆ ಮರಳಿದಾಗ ಆತನ ವ್ಯಕ್ತಿತ್ವ ಸಂಪೂರ್ಣವಾಗಿ ಹಾಗೂ ನಾಟಕೀಯವಾಗಿ ಬದಲಾಗಿತ್ತು ಎಂದು ಆತನ ತಮ್ಮ ಕ್ರಿಸ್ ನಲ್ಲನ್ ಹೇಳಿದ್ದಾರೆ. ಒಂದು ಕಾಲದಲ್ಲಿ ಹಾಸ್ಯ ಪ್ರವೃತ್ತಿಯ ವ್ಯಕ್ತಿತ್ವ ಹೊಂದಿದ್ದ ಆತ ಬಳಿಕ ಖಿನ್ನತೆಗೆ ಒಳಗಾಗಿದ್ದನು ಎನ್ನಲಾಗಿದೆ.