ಮೇ 11: ಎತ್ತಿನಹೊಳೆ ಯೋಜನೆ ವಿರೋಧಿಸಿ ಪುತ್ತೂರಿನಲ್ಲಿ ಪ್ರತಿಭಟನೆ
ಪುತ್ತೂರು, ಮೇ 4: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪುತ್ತೂರು ಘಟಕದ ಆಶ್ರಯದಲ್ಲಿ ಮೇ 11 ರಂದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲು ಬುಧವಾರ ಸಂಜೆ ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮಿತಿಯ ಪುತ್ತೂರು ಘಟಕದ ಅಧ್ಯಕ್ಷ ಡಾ.ಎಂ.ಕೆ. ಪ್ರಸಾದ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಮೇ 11 ರಂದು ಸಂಜೆ ಮೆರವಣಿಗೆ ಮತ್ತು ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಹಾಗೂ ಸಹಾಯಕ ಕಮಿಷನರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರತಿಭಟನೆಗೆ ಪೂರ್ವಭಾವಿಯಾಗಿ ಮೇ 10ರಂದು ಪುತ್ತೂರು ತಾಲೂಕಿನಾದ್ಯಂತ ಬೈಕ್ ರ್ಯಾಲಿ ನಡೆಸಲು ಸಭೆ ನಿರ್ಣಯ ಕೈಗೊಂಡಿತು.
ಎತ್ತಿನಹೊಳೆ ಯೋಜನೆ ವಿರೋಧಿಸಿ ಮೇ 16 ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಮೇ 19 ರಂದು ನಡೆಯಲಿರುವ ಸ್ವಯಂ ಪ್ರೇರಿತ ಜಿಲ್ಲಾ ಬಂದ್‌ಗೆ ಪೂರ್ವಭಾವಿಯಾಗಿ ಹೋರಾಟದ ಕುರಿತು ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲೂ ಪ್ರತಿಭಟನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪುತ್ತೂರಿನಲ್ಲಿ ಪ್ರತಿಭಟನೆಯ ರೂಪುರೇಷೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ. ಹೆಗೆ,ನೇತ್ರಾವತಿ ನದಿ ತಿರುವು ಯೋಜನೆಯೇ ಎತ್ತಿನ ಹೊಳೆಯ ರೂಪದಲ್ಲಿ ಜಾರಿಗೊಳ್ಳುತ್ತಿದೆ ಎಂಬ ಸತ್ಯ ದ.ಕ. ಜಿಲ್ಲೆಯ ಜನರಿಗೆ ಅರಿವಾಗಬೇಕು. ನೇತ್ರಾವತಿಯ ತಲೆ ಮುಟ್ಟಲು ಹೋದ ಕಾರಣವೇ ದ.ಕ. ಜಿಲ್ಲೆಂುಲ್ಲಿ ಬರದ ಪರಿಸ್ಥಿತಿ ಉಂಟಾಗಿದೆ. ನೀರಿಗಾಗಿ ಇಂದು ಬೀದಿಗಿಳಿವ ಪರಿಸ್ಥಿತಿ ಉಂಟಾಗಿದೆ. ಇದು ತುಳುನಾಡಿನ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಯಾವುದೇ ರಾಜಕೀಯ ಲಾಭಕ್ಕಾಗಿ ಈ ಹೋರಾಟವಲ್ಲ. ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಉಳಿಸಲು ಈ ಹೋರಾಟ ನಡೆಯುತ್ತಿದೆ. ಸರಕಾರಕ್ಕೆ ಜಿಲ್ಲೆಯ ಜನರ ನೋವು ಮತ್ತು ಬೇಡಿಕೆ ಅರ್ಥವಾಗದಿದ್ದರೆ ಸಂಘಟಿತ ಹೋರಾಟದ ಮೂಲಕ ಅದನ್ನು ಅರ್ಥ ಮಾಡಿಸಲು ಜನರು ಮುಂದಾಗಬೇಕು ಎಂದರು.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಮೇ 16 ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಗೂ ಮೇ 19ರಂದು ನಡೆಯಲಿರುವ ಸ್ವಯಂ ಪ್ರೇರಿತ ದ.ಕ. ಜಿಲ್ಲಾ ಬಂದ್‌ಗೆ ಸರಕಾರ ಮಣಿಯದಿದ್ದಲ್ಲಿ ಹರ್ಯಾಣ ಮಾದರಿಯಲ್ಲಿ ಜಿಲ್ಲೆಯಲ್ಲಿ ಜನದಂಗೆಯಾದರೆ ಸರಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿ ಮನೆಯಿಂದ ಒಬ್ಬರಂತೆ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅವರು ವಿನಂತಿಸಿದರು.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪುತ್ತೂರು ತಾಲೂಕು ಘಟಕವನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾ. ಎಂ.ಕೆ. ಪ್ರಸಾದ್, ಉಪಾಧ್ಯಕ್ಷರಾಗಿ ಪಿ.ಬಿ. ಹಸನ್ ಹಾಜಿ ಹಾಗೂ ರೆ.ಫಾ. ಅಲ್ಫ್ರೆಡ್ ಪಿಂಟೊರನ್ನು ಆಯ್ಕೆ ಮಾಡಲಾಯಿತು. ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಸಂಘಟನೆಗಳ ಮುಂದಾಳುಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಯಿತು.
ವೇದಿಕೆಯಲ್ಲಿ ಅರುಣ್ ಕುಮಾರ್ ಪುತ್ತಿಲ, ಪುಯಿಲ ಕೇಶವ ಗೌಡ, ಪಿ.ಬಿ.ಹಸನ್ ಹಾಜಿ, ನೂರುದ್ದೀನ್ ಸಾಲ್ಮರ, ಸತೀಶ್ ರೈ, ಎಂ.ಫಕೀರ, ಮುರಳೀಕೃಷ್ಣ ಹಸಂತಡ್ಕ, ಶಶಿರಾಜ್ ಶೆಟ್ಟಿ, ಯತೀಶ್ ಶೆಟ್ಟಿ, ಪಿ.ಎಂ.ಅಬೂಬಕರ್, ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.