ಪ್ರಧಾನಿ ಬಿಎ ಡಿಗ್ರಿ ಬಗ್ಗೆ ಮಾಹಿತಿಗೆ ಪಿಎಂಒ ಸಂಪರ್ಕಿಸಿ : ದಿಲ್ಲಿ ವಿವಿಯಿಂದ ಆಪ್ ನಾಯಕರಿಗೆ ಹಾರಿಕೆಯ ಉತ್ತರ
ಹೊಸದಿಲ್ಲಿ,ಮೇ 4: ಪ್ರಧಾನಿ ನರೇಂದ್ರ ಮೋದಿಯ ಬಿಎ ಪದವಿಗೆ ಸಂಬಂಧಿಸಿದ ವಿವಾದವು ಮಂಗಳವಾರ ಹೊಸ ತಿರುವನ್ನು ಪಡೆದುಕೊಂಡಿದೆ. ಪ್ರಧಾನಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿಗಾಗಿ ದಿಲ್ಲಿ ವಿವಿಯ ಬದಲು ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸುವಂತೆ, ವಿವಿಯ ರಿಜಿಸ್ಟ್ರಾರ್ ತಮಗೆ ತಿಳಿಸಿದ್ದಾಗಿ ಆಮ್‌ಆದ್ಮಿಪಕ್ಷದ ಮೂವರು ನಾಯಕರು ಆಪಾದಿಸಿದ್ದಾರೆ.
ಮೋದಿಯವರ ಪದವಿ ಶಿಕ್ಷಣದ ಬಗ್ಗೆ ಪುರಾವೆಗಾಗಿ, ಎಎಪಿ ನಾಯಕರಾದ ಅಶೀಶ್ ಖೇತಾನ್, ಅಶುತೋಷ್ ಹಾಗೂ ರಾಘವ್ ಛಡ್ಡಾ ಬುಧವಾರ ದಿಲ್ಲಿ ವಿವಿಯ ರಿಜಿಸ್ಟ್ರಾರ್‌ರನ್ನು ಸಂಪರ್ಕಿಸಿದ್ದರು. ಆದರೆ ಈ ಬಗ್ಗೆ ಮಾಹಿತಿಗಾಗಿ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬೇಕೆಂದು ರಿಜಿಸ್ಟ್ರಾರ್ ತಮಗೆ ಉತ್ತರಿಸಿದರೆಂದು ಅವರು ಹೇಳಿದ್ದಾರೆ.
ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮಾಹಿತಿ ನೀಡುವಂತೆ ಕಳೆದ ವಾರ ಕೇಂದ್ರ ಮಾಹಿತಿ ಆಯೋಗವು, ಗುಜರಾತ್ ವಿವಿ ಹಾಗೂ ದಿಲ್ಲಿ ವಿವಿಗೆ ಸೂಚನೆ ನೀಡಿತ್ತು. ಗುಜರಾತ್ ವಿವಿಯು ಕಳೆದ ರವಿವಾರ ನೀಡಿದ ಹೇಳಿಕೆಯೊಂದರಲ್ಲಿ,ಪ್ರಧಾನಿ ಮೋದಿಯವರು, ಬಾಹ್ಯ ವಿದ್ಯಾರ್ಥಿಯಾಗಿ 62.3 ಶೇಕಡ ಅಂಕಗಳನ್ನು ಗಳಿಸಿದ್ದರೆಂದು ತಿಳಿಸಿತ್ತು.
ಮೋದಿಯವರ ಪದವಿ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಕೋರಿ ತಾವು ದಿಲ್ಲಿ ವಿವಿ ಉಪಕುಲಪತಿ ಯೋಗೀಶ್ ತ್ಯಾಗಿ ಹಾಗೂ ರಿಜಿಸ್ಟ್ರಾರ್ ಅವರಿಗೆ ಪದೇಪದೇ ಕರೆಗಳನ್ನು ಹಾಗೂ ಲಿಖಿತ ಸಂದೇಶಗಳನ್ನು ರವಾನಿಸಿದರೂ ಅವುಗಳಿಗೆ ಯಾವುದೇ ಉತ್ತರ ದೊರೆತಿಲ್ಲವೆಂದು ಅಶೀಶ್ ಖೇತಾನ್ ಆಪಾದಿಸಿದ್ದಾರೆ.
‘‘ ಪ್ರಧಾನಿಯ ಪದವಿ ಅಥವಾ ಅವರ ದಾಖಲಾತಿಯ ಬಗ್ಗೆ ದಿಲ್ಲಿ ವಿವಿಗೆ ಯಾವುದೇ ಮಾಹಿತಿಯನ್ನು ಒದಗಿಸಲು ಸಾಧ್ಯವಾಗಿಲ್ಲವೆಂದು ಅವರು ದೂರಿದ್ದಾರೆ.