ತುಂಬೆ ರಾ.ಹೆ. ಬದಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಫ್ಲೆಕ್ಸ್!

Update: 2016-05-04 18:09 GMT

ಬಂಟ್ವಾಳ, ಮೇ 4: ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಬದಿ, ಕಂಬಗಳು ಹಾಗೂ ಕಟ್ಟಡಗಳ ಮೇಲೆ ‘ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಶಾಲೆಗೆ ಸೇರಿಸಿ’ ಎಂಬ ವಿವಿಧ ಇಂಗ್ಲಿಷ್ ಮಾಧ್ಯಮ ಶಾಲೆಗಳ ಬೃಹತ್ ಫ್ಲೆಕ್ಸ್‌ಗಳನ್ನು ಕಾಣಬಹುದು. ಆದರೆ ‘ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ’ ಎಂಬ ಫ್ಲೆಕ್ಸನ್ನು ಬಹುಷ: ಎಲ್ಲೂ ಕಂಡಿರಲಿಕ್ಕಿಲ್ಲ. ಆದರೆ, ತುಂಬೆ ರಾ.ಹೆ.ಬದಿಯಲ್ಲಿ ತುಂಬೆ ಸರಕಾರಿ ಶಾಲೆಯ ಫ್ಲೆಕ್ಸ್ ಎಲ್ಲರ ಗಮನ ಸೆಳೆಯುತ್ತಿವೆ.

ಈ ಫ್ಲೆಕ್ಸ್ ಮೂಲಕ ಖಾಸಗಿ ಶಾಲೆಗೂ ಸರಕಾರಿ ಶಾಲೆಗೂ ಮೂಲಭೂತ ಸೌಕರ್ಯ, ಬೋಧನಾ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸಾರುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಖಾಸಗಿ ಶಾಲೆಗಿಂತಲೂ ಹೆಚ್ಚಿನ ಸವಲತ್ತುಗಳು ಸರಕಾರಿ ಶಾಲೆಗಳಲ್ಲೇ ದೊರೆಯುತ್ತದೆ ಎಂಬುದನ್ನು ಓದುಗರಿಗೆ ಅರ್ಥಮಾಡಿಕೊಡುತ್ತಿದೆ.

ವಿಶೇಷವೆಂದರೆ ಈ ಫ್ಲೆಕ್ಸನ್ನು ನೋಡಿದವರು ಸಂಪೂರ್ಣವಾಗಿ ಓದಿದ ಬಳಿಕವೇ ಅಲ್ಲಿಂದ ಕದಡುತ್ತಿರುವ ದೃಶ್ಯ ಇದೀಗ ಕಂಡು ಬರುತ್ತಿದೆ. ಒಂದರ್ಥದಲ್ಲಿ ಈ ಫ್ಲೆಕ್ಸ್ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತಿದೆ. ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯದಲ್ಲಿ ಖಾಸಗಿ ಶಾಲೆಗಳಿಗಿಂತ ಏನೂ ಕಡಿಮೆ ಇಲ್ಲ ಎಂದು ಸಾರುತ್ತಿದೆ. ಖಾಸಗಿ ಶಾಲೆಗಳ ಫ್ಲೆಕ್ಸ್‌ಗಳಲ್ಲಿರುವಂತೆ ಈ ಫ್ಲೆಕ್ಸ್‌ನಲ್ಲೂ ತುಂಬೆ ಸರಕಾರಿ ಶಾಲೆಯಲ್ಲಿರುವ ಮೂಲಭೂತ ವ್ಯವಸ್ಥೆ, ಬೋಧನಾ ಗುಣ ಮಟ್ಟ, ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ, ಕಂಪ್ಯೂಟರ್ ಸೇರಿದಂತೆ ಆಧುನಿಕ ಶಿಕ್ಷಣ ಶೈಲಿ, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಇತ್ಯಾದಿಯನ್ನು ವಿವರಿಸಲಾಗಿದೆ.

ಒಟ್ಟಿನಲ್ಲಿ ಆಂಗ್ಲ ಮಾಧ್ಯಮ ವ್ಯಾಮೋಹ ದಿಂದ ಮಕ್ಕಳಿಲ್ಲದೆ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ ಸರಕಾರಿ ಶಾಲೆಗೆ ಮಕ್ಕಳು ಬರುವಂತೆ ಮಾಡಲು ತುಂಬೆ ಸರಕಾರಿ ಶಾಲೆಯ ಶಿಕ್ಷಕ ವೃಂದ ಹಾಗೂ ಅಭಿವೃದ್ಧಿ ಸಮಿತಿಯ ಈ ಕಾರ್ಯ ಗಮನಾರ್ಹವಾಗಿದೆ. ಆದರೆ ಈ ಮಹತ್ತರ ಕಾರ್ಯ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಮಾತ್ರ ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News