ಉತ್ತರ ಭಾರತದಲ್ಲಿ ಕಾಡ್ಗಿಚ್ಚು ಶಮನಕ್ಕೆ ಮಳೆರಾಯನ ನೆರವು
Update: 2016-05-04 23:41 IST
ಡೆಹ್ರಾಡೂನ್, ಮೇ 4: ಕಾಡ್ಗಿಚ್ಚಿನ ಜ್ವಾಲೆಯಲ್ಲಿ ಬೇಯುತ್ತಿರುವ ಉತ್ತರಾಖಂಡದ ನೆರವಿಗೆ ಸ್ವತಃ ಮಳೆರಾಯನೇ ಧಾವಿಸಿದ್ದಾನೆ. ಮಂಗಳವಾರ ರಾತ್ರಿಯಿಡೀ ಸುರಿದ ಮಳೆ ಕಾಡ್ಗಿಚ್ಚನ್ನು ಶಮನಗೊಳಿಸಲು ನಡೆಯುತ್ತಿದ್ದ ಕಾರ್ಯಾಚರಣೆಗೆ ಭಾರೀ ಬಲ ನೀಡಿದೆ. ಇದೇ ವೇಳೆ ಕಾಡ್ಗಿಚ್ಚಿಗೆ ಅರಣ್ಯ ಇಲಾಖೆಯ ಓರ್ವ ಸಿಬ್ಬಂದಿ ಬಲಿಯಾಗಿದ್ದು, ಇದರೊಂದಿಗೆ ಸತ್ತವರ ಸಂಖ್ಯೆ ಏಳಕ್ಕೇರಿದೆ.
ಮಂಗಳವಾರ ಸಂಜೆಯಿಂದಲೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದ್ದು, ರಾತ್ರಿಯಾಗುತ್ತಿದ್ದಂತೆ ತಪ್ಪಲು ಪ್ರದೇಶವನ್ನೂ ಆವರಿಸಿಕೊಂಡಿತ್ತು. ಪರ್ವತ ಪ್ರದೇಶದ ಮುನ್ಸಿಯಾರಿಯಲ್ಲಿ 11 ಮಿ.ಮೀ. ಮತ್ತು ತಪ್ಪಲು ಪ್ರದೇಶದ ಡೆಹ್ರಾಡೂನಿನಲ್ಲಿ 7 ಮಿ.ಮೀ.ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ವಿಕ್ರಂ ಸಿಂಗ್ ತಿಳಿಸಿದರು.