ಚುಟುಕು ಸುದ್ದಿಗಳು

Update: 2016-05-04 18:15 GMT

ಜೋಕಟ್ಟೆ: ರಕ್ತದಾನ ಶಿಬಿರ
ಜೋಕಟ್ಟೆ, ಮೇ, 4: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ವಲಯ ವತಿಯಿಂದ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದೊಂದಿಗೆ ಇಲ್ಲಿನ ಸರಕಾರಿ ಶಾಲೆ ವಠಾರದಲ್ಲಿ ನಡೆದ ರಕ್ತದಾನ ಶಿಬಿರವನ್ನು ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ರಫೀಕ್ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.

‘ಜಿಪಂ ಅಧ್ಯಕ್ಷರಿಗೂ ಅನುದಾನ ನೀಡಿ’
ಉಡುಪಿ, ಮೇ 4: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಶಿವಮೊಗ್ಗ ಇದರ 2015-16ನೆ ಸಾಲಿನ ಪ್ರಥಮ ಸಭೆ ಇತ್ತೀಚೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಪಂ ನೂತನ ಅಧ್ಯಕ್ಷ ದಿನಕರ, ಮುಂದಿನ ಸಾಲಿನ ಕ್ರಿಯಾ ಯೋಜನೆಯಲ್ಲಿ ಜಿಪಂಗಳ ಅಧ್ಯಕ್ಷರಿಗೂ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಂತೆ ಸಮಾನವಾಗಿ ಅನುದಾನ ನೀಡುವಂತೆ ಬೇಡಿಕೆ ಮಂಡಿಸಿದರು.

ಮರಳುದಿಬ್ಬಗಳಿಗೆ ಪರಿಸರ ವಿಮೋಚನ ಪತ್ರ
ಉಡುಪಿ, ಮೇ 4: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ಪ್ರದೇಶದಲ್ಲಿ ಒಳಜಲ ಸಾರಿಗೆಗೆ ಅಡಚಣೆ ಉಂಟು ಮಾಡುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ನೀಡಿರುವ ಅಧಿಕೃತ ಜ್ಞಾಪನದಂತೆ ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮ 1994ರ ತಿದ್ದುಪಡಿ ನಿಯಮ 2013ರಂತೆ ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಹರಿಯುವ ನದಿ ಪಾತ್ರಗಳಲ್ಲಿ 23 ಮರಳು ದಿಬ್ಬಗಳಿಗೆ ಪರಿಸರ ವಿಮೋಚನಾ ಪತ್ರ ಪಡೆಯಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಎಪ್ರಿಲ್ ಅಂತ್ಯಕ್ಕೆ ಉಡುಪಿ ತಾಲೂಕಿನಲ್ಲಿ 41 ಮತ್ತು ಕುಂದಾಪುರ ತಾಲೂಕಿನಲ್ಲಿ 27 ಒಟ್ಟು 68 ತಾತ್ಕಾಲಿಕ ಮರಳು ಪರವಾನಿಗೆಯನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ: ಚಿತ್ರಕಲಾ ಶಿಬಿರ ಸಮಾರೋಪ
ಉಡುಪಿ, ಮೇ 4: ಪ್ರತಿಯೊಂದು ಕ್ಷೇತ್ರಕ್ಕೆ ಕಲಾತ್ಮಕತೆ ಎಂಬುದು ಬಹಳ ಮುಖ್ಯ. ಇದು ವ್ಯಕ್ತಿಯ ಸುಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಹಿರಿಯ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಹೇಳಿದ್ದಾರೆ. ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ನಡೆದ ‘ಕಲಾ ಹಬ್ಬ’ ಬೇಸಿಗೆ ರಜಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮುಖ್ಯಅತಿಥಿಗಳಾಗಿ ಭಾರತೀಯ ಜೇಸಿಸ್ ವಲಯಾಧಿಕಾರಿ ಮನೋಜ್ ಕಡಬ, ಕಲಾ ವಿಮರ್ಶಕ ಉಪಾಧ್ಯಾಯ ಮೂಡುಬೆಳ್ಳೆ ಮತ್ತು ಕಲಾಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗ ಉಪಸ್ಥಿತರಿದ್ದರು. ಶಿಬಿರಾರ್ಥಿ ಗಿರಿಧರ್ ಪೈ ಸ್ವಾಗತಿಸಿ, ಕಲಾ ಶಿಕ್ಷಕಿ ಪವಿತ್ರಾ ಸಿ. ಕಾರ್ಯಕ್ರಮ ನಿರೂಪಿಸಿದರು. ಕಲಾ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಮುಖವಾಡ ತಯಾರಿಕೆ, ಗುಲಾಬಿ, ಹೂ ಹೂದಾನಿ ತಯಾರಿಕೆ, ವಾಲ್ ಹ್ಯಾಂಗಿಂಗ್, ಗಾಳಿಪಟ, ಲ್ಯಾಂಡ್‌ಸ್ಕೇಪ್, ಟ್ಯಾಟೋ ರಚನೆ, ಮ್ಹೂವಿ ಸ್ಕೃೀನಿಂಗ್, ಪೇಪರ್ ಕೊಲಾಜ್, ಖಾವಿ ಪೈಂಟಿಂಗ್, ತ್ರೆಡ್ ಪೈಂಟಿಂಗ್, ಸ್ಟೋನ್ ಪೈಂಟಿಂಗ್, ಸ್ಕ್ರೀನ್ ಪೈಂಟಿಂಗ್, ಫೇಸ್ ಪೈಂಟಿಂಗ್, ಕ್ಲೇ ಮಾಡೆಲಿಂಗ್ ಮತ್ತಿತರ ಮನೋರಂಜನಾ ಚಟುವಟಿಕೆಗಳು ನಡೆದವು.

ಆನ್‌ಲೈನ್ ಟ್ಯಾಕ್ಸಿ ಅಸೋಸಿಯೇಶನ್ ಮಹಾಸಭೆ
ಮಂಗಳೂರು, ಮೇ 4: ದಕ್ಷಿಣ ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಮಹಾ ಸಭೆಯು ನಗರದಲ್ಲಿ ಜರಗಿತು. ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನಗಳು ಸಾಮಾನ್ಯ ಜನರನ್ನು ವೇಗವಾಗಿ ತಲುಪುತ್ತಿದ್ದು, ಆನ್‌ಲೈನ್ ಟ್ಯಾಕ್ಸಿ ಸೇವೆಗಳು ಕೂಡಾ ಜನರಿಗೆ ಉಪಯುಕ್ತವಾಗಿದೆ. ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಆನ್‌ಲೈನ್ ಟ್ಯಾಕ್ಸಿ ಆಪರೇಟರ್‌ಗಳು ಕೂಡಾ ನಗರದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಹಾಗಾಗಿ ಸರಕಾರ ಆನ್‌ಲೈನ್ ಟ್ಯಾಕ್ಸಿ ಚಾಲಕರ ಸೇವೆಯನ್ನು ಗುರುತಿಸಬೇಕು ಎಂದರು.ಅರವಿಂದ ಜಿ. ಭಟ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಾದಿಕ್ ಕಣ್ಣೂರು ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ರಾಫಿ ಕಣ್ಣೂರು ಲೆಕ್ಕಪತ್ರ ಮಂಡಿಸಿದರು.

ವಾಹನ ನಿಲುಗಡೆ ಸ್ಥಳ ಉದ್ಘಾಟನೆ
 ಮಣಿಪಾಲ, ಮೇ 4: ಮಣಿಪಾಲ ಪೊಲೀಸ್ ಠಾಣೆಯ ಮುಂದೆ ನೂತನವಾಗಿ ನಿರ್ಮಿಸಲಾದ ವಾಹನ ನಿಲುಗಡೆ ಸ್ಥಳವನ್ನು ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಈ ಸಂದರ್ಭ ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ,ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ನರಸಿಂಹ ನಾಯಕ್, ರಮೇಶ್ ಕಾಂಚನ್, ಜನಾರ್ದನ ಭಂಡಾರ್‌ಕಾರ್, ಸುಖೇಶ್, ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ವಿ ಗಿರೀಶ್, ಉಪನಿರೀಕ್ಷಕ ಗೋಪಾಲಕೃಷ್ಣ ಹಾಗೂ ಮಣಿಪಾಲ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು. ಮಣಿಪಾಲ ಠಾಣಾ ಆವರಣದಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಹಾಗೂ ವಾರಸುದಾರರಿಲ್ಲದ ವಾಹನಗಳನ್ನು ಸ್ವಾಧೀನಪಡಿಸಿಡಲಾಗಿದ್ದು,ಠಾಣೆಗೆ ಭೇಟಿ ನೀಡಲು ಬರುವ ಸಂದರ್ಶಕರ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶವಿಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದರಿಂದ ಸಮಸ್ಯೆಯುಂಟಾಗುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಈ ಸಮಸ್ಯೆಯ ಕುರಿತು ನಗರಸಭೆಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದೀಗ ಉಡುಪಿ ನಗರಸಭೆ ಸ್ಪಂದಿಸಿ ಮಣಿಪಾಲ ಠಾಣಾ ಹೊರ ಆವರಣದಲ್ಲಿ ಚರಂಡಿಯ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಿ, ಇಂಟರ್ ಲಾಕ್ ಅಳವಡಿಸಿ ನೂತನವಾಗಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದೆ.

ಉಡುಪಿ: ರಾಜ್ಯ ರ್ಯಾಂಕಿಂಗ್ ಜೂ.ಬ್ಯಾಡ್ಮಿಂಟನ್ ಪಂದ್ಯಾಟ
ಉಡುಪಿ, ಮೇ 4: ಇತ್ತೀಚೆಗೆ ನಿಧನರಾದ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕೊಡವೂರು ಸ್ಮರಣಾರ್ಥ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯೊಂದನ್ನು ಮೇ 14ರಿಂದ 17ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2010ರಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಕ್ರೀಡೆ ಜನಪ್ರಿಯತೆ ಗಳಿಸಿ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಕಾರಣರಾದ ಪ್ರಕಾಶ್ ಕೊಡವೂರ್‌ರ ಸ್ಮರಣಾರ್ಥ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಮೂಲಕ ಪ್ರತೀ ವರ್ಷ ಈ ಟೂರ್ನಿಯನ್ನು ನಡೆಸಲಾಗುವುದು. ರಾಜ್ಯ ಮಟ್ಟದ ಈ ರ್ಯಾಂಕಿಂಗ್ ಟೂರ್ನಿ 17 ವರ್ಷದೊಳಗಿನ ಹಾಗೂ 19 ವರ್ಷದೊಳಗಿನ ಬಾಲಕ-ಬಾಲಕಿಯರಿಗಾಗಿ ಒಟ್ಟು 9 ವಿಭಾಗಗಳಲ್ಲಿ ನಡೆಯಲಿದೆ. 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್, 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಮತ್ತು ಡಬಲ್ಸ್‌ನೊಂದಿಗೆ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಗಳು ನಡೆಯಲಿವೆ. ಮೊದಲ ದಿನ (ಮೇ 14) ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. 15ರಿಂದ ಮುಂದಿನ ಮೂರು ದಿನಗಳ ಕಾಲ ಪ್ರಧಾನ ಡ್ರಾದಂತೆ ಪಂದ್ಯಗಳು ನಡೆಯಲಿವೆ. ಪ್ರವೇಶ ಪತ್ರಗಳನ್ನು ಕಳುಹಿಸಲು ಮೇ 7 ಕೊನೆಯ ದಿನವಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೈ.ಸುಧೀರ್ ಕುಮಾರ್, ಉಪಾಧ್ಯಕ್ಷ ಸುಹೈಲ್ ಅಮೀನ್, ಸಂದೀಪ್ ನಾಯಕ್, ಅರುಣ್ ಶೇರಿಗಾರ್, ದೀಪಕ್ ಹಾಗೂ ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News