×
Ad

‘ಎಂಆರ್‌ಎಂ ವಿರುದ್ಧ ಜಾಗೃತರಾಗಿ’

Update: 2016-05-04 23:48 IST

ಬಂಟ್ವಾಳ, ಮೇ 4: ಅಜ್ಮೀರ್, ಮಕ್ಕಾ ಮಸೀದಿ, ಮಾಲೆಂಗಾವ್ ಸೇರಿದಂತೆ ಹಲವು ಬಾಂಬ್ ಸ್ಫೋಟದ ರೂವಾರಿ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟಿರುವ ಮುಸ್ಲಿಮ್ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಬಗ್ಗೆ ದೇಶದ ಮುಸ್ಲಿಮರು ಜಾಗೃತರಾಗಬೇಕಿದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹೀಂ ವೌಲವಿ ಕೇರಳ ಕರೆ ನೀಡಿದರು. ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರವ್ಯಾಪ್ತಿ ಹಮ್ಮಿಕೊಂಡಿರುವ ‘ಏಕತೆಯೇ ಭದ್ರತೆ’ ಅಭಿಯಾನದ ಅಂಗವಾಗಿ ತಾಲೂಕಿನ ಫರಂಗಿಪೇಟೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವಿರೋಧಿಯಾಗಿರುವ ಆರೆಸ್ಸೆಸ್ ಹಿಂದುತ್ವ ರಾಷ್ಟ್ರದ ನಿರ್ಮಾಣಕ್ಕೆ ದಾರಿ ಸುಗಮವಾಗಲೆಂದು ಎಂಆರ್‌ಎಂ ಅನ್ನು ಸೃಷ್ಟಿಮಾಡಿದೆ. ಮುಸ್ಲಿಮರ ನಡುವಿನ ಐಕ್ಯತೆಯನ್ನು ಮುರಿದು ತನ್ನ ಬೇಳೆ ಬೇಯಿಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ದೇಶದ ಎಲ್ಲ ಮುಸ್ಲಿಮ್ ಸಂಘಟನೆಗಳು ಮುಸ್ಲಿಮರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು. ಜಾಫರ್ ಫೈಝಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಮೇಲಂಗಡಿ ಜುಮಾ ಮಸೀದಿಯ ಮುದರ್ರಿಸ್ ಯೂಸುಫ್ ಮಿಸ್ಬಾಹಿ, ಫರಂಗಿಪೇಟೆ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ತುಂಬೆ ಜುಮಾ ಮಸೀದಿಯ ಅಧ್ಯಕ್ಷ ಟಿ.ಎಂ.ಮೂಸಬ್ಬ, ಇಮಾಮ್ಸ್ ಕೌನ್ಸಿಲ್ ಜಿಲ್ಲಾ ಉಪಾಧ್ಯಕ್ಷ ಮಜೀದ್ ನಿಝಾಮಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಹನೀಫಿ, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ಫರಂಗಿಪೇಟೆ, ಬಿ.ಸಿ.ರೋಡ್ ವಲಯಾಧ್ಯಕ್ಷ ಇಕ್ಬಾಲ್ ಮದ್ದ, ಯಂಗ್ ಫ್ರೆಂಡ್ಸ್ ಅಮೆಮಾರ್ ಮುಖ್ಯಸ್ಥ ಸುಲೈಮಾನ್ ಉಸ್ತಾದ್, ಯೂತ್ ಫೆಡರೇಶನ್ ಫರಂಗಿಪೇಟೆ ಅಧ್ಯಕ್ಷ ನೌಫಲ್, ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಅಧ್ಯಕ್ಷ ಹಬೀಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಫ್ವಾನ್ ತುಂಬೆ ಕಿರಾಅತ್ ಪಠಿಸಿದರು. ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News