ಮೇ 21: ಅಸಹಜ ಪ್ರಕರಣಗಳ ತನಿಖೆ ವಿಳಂಬ ಖಂಡಿಸಿ ಪ್ರತಿಭಟನೆ
ಸುಬ್ರಹ್ಮಣ್ಯ, ಮೇ 4: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಪ್ರಕರಣಗಳ ತನಿಖೆ ಪ್ರಾಥಮಿಕ ಹಂತದಲ್ಲೆ ಹಳ್ಳ ಹಿಡಿಯುತ್ತಿದೆ. ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಅಸಹಜ ಸಾವು, ಕೊಲೆ ದರೋಡೆ ಪ್ರಕರಣಗಳಲ್ಲಿ ನೈಜ ಆರೋಪಿಗಳ ಪತ್ತೆಯಾಗದಿರುವುದು ಈ ಭಾಗದ ನಾಗರಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಪ್ರಗತಿ ಕಾಣದ ಎಲ್ಲ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿ ಮತ್ತು ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಮೇ 21ರಂದು ಠಾಣಾ ವ್ಯಾಪ್ತಿಯ 39 ಗ್ರಾಮಗಳ ನಾಗರಿಕರನ್ನು ಸೇರಿಸಿ ಪ್ರತಿಭಟನೆ ನಡೆಸುವ ಬಗ್ಗೆ ಗುತ್ತಿಗಾರಿನಲ್ಲಿ ಬುಧವಾರ ನಡೆದ ಪಕ್ಷಾತೀತ ಪ್ರಮುಖ ನಾಗರಿಕರ ಸಭೆಯಲ್ಲಿ ನಿರ್ಧರಿಸಿತು.ಜಿಪಂ ಮಾಜಿ ಸದಸ್ಯ ಭರತ್ ಮುಂಡೋಡಿ ಮಾತನಾಡಿ ಚಾರ್ಮತದ ಹಸುಳೆ ಶಾರಿಕಾ ಅಸಹಜ ಸಾವು, ನಡುಗಲ್ಲುವಿನ ಉತ್ರಂಬೆ ಯುವತಿ ಅಕ್ಷಿತಾ ಸಾವು ಹಾಗೂ ಉಪ್ಪುಕಳ ಪರಮೇಶ್ವರ ಗೌಡರ ಕೊಲೆ ಪ್ರಕರಣ, ಉಪ್ಪುಕಳ ವಿದ್ಯಾ ಎಂಬ ಮಹಿಳೆಯ ಗುಂಡಿಕ್ಕಿ ಕೊಲೆಗೈದ ಪ್ರಕರಣ ಜತೆಗೆ ಇತ್ತೀಚೆಗೆ ನಡೆದ ಮೆಟಿನಡ್ಕ ವೇದಾವತಿ ಕೊಲೆ ಪ್ರಕರಣ ಹಾಗೂ ಈ ಭಾಗದಲ್ಲಿ ನಡೆದ ಹಲವಾರು ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಇಂದಿಗೂ ಸಾಧ್ಯವಾಗಿಲ್ಲ ಎಂದರು.
ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ನಿತ್ಯಾನಂದ ಮುಂಡೋಡಿ., ಲೋಕೇಶ್ವರಿ ವಿನಯಚಂದ್ರ, ಬಿ.ಕೆ. ಬೆಳ್ಯಪ್ಪಗೌಡ, ವೆಂಕಟ್ ವಳಲಂಬ, ಗ್ರಾಪಂ ಅಧ್ಯಕ್ಷರುಗಳಾದ ದಿವಾಕರ ಮುಂಡೋಡಿ, ಅಚ್ಚುತಾ ಗುತ್ತಿಗಾರು, ಶೈಲೇಶ್ ಅಂಬೆಕಲ್ಲು, ಮುಳಿಯ ಕೇಶವ ಭಟ್, ಪಿ.ಸಿ. ಜಯರಾಮ ಹಾಗೂ ಮೃತ ವೇದಾವತಿಯ ಸಹೋದರ ಚಂದ್ರಶೇಖರ, ವರ್ತಕರು, ವಾಹನ ಚಾಲಕ ಸಂಘದವರು, ಮಹಿಳಾ ಸಂಘಟನೆಯ ಪ್ರತಿನಿಧಿಗಳು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.