ಮೂಡಿಗೆರೆಯಲ್ಲಿ ಛಲವಾದಿ ಮಹಾಸಭಾದಿಂದ ಅಂಬೇಡ್ಕರ್ ಜಯಂತಿ

Update: 2016-05-06 11:32 GMT

ಮೂಡಿಗೆರೆ, ಮೇ6: ಮನುವಾದಿ ಸಂವಿಧಾನದಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಿಲ್ಲ. ಡಾ.ಬಿ.ಆರ್.ಅಂಬೇಡ್ಕರ್‌ರ ಮಾನವತಾವಾದಿ ಸಂವಿಧಾನದಿಂದ ದೇಶವನ್ನು ಸುಂದರವಾಗಿ ನಿರ್ಮಿಸಲು ಸಾಧ್ಯವಿದೆ ಎಂದು ಮೈಸೂರಿನ ಉರಿಲಿಂಗಿ ಪೆದ್ದಿ ಮಠ ಮಹಾಸಂಸ್ಥಾನದ ಜ್ಞಾನಪ್ರಕಾಶ ಮಹಾಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರ 125ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕಾರಣದ ಪಿತಾಮಹ ಅಂಬೇಡ್ಕರ್ ಆಗಿದ್ದಾರೆ. ಅವರ ಸಂವಿಧಾನವನ್ನು ಬಳಿಸಿಕೊಂಡು ಪ್ರಜಾಪ್ರುತ್ವದಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಲಾಗುತ್ತಿದೆ. 1920ರಲ್ಲಿ ದೇಶದ ಮತದಾರರ ಸಂಖ್ಯೆ 4016 ಮಾತ್ರವಾಗಿತ್ತು. ರಾಜರಿಗೆ ಮಂತ್ರಿಗಳಿಗೆ ನೂರಾರು ಎಕರೆ ೂಮಾಲಿಕರಿಗೆ ಮಾತ್ರ ದೇಶದಲ್ಲಿ ಮತದಾನದ ಹಕ್ಕು ಇತ್ತು. ಮಹಿಳೆಯರಿಗೂ ಮತದಾನ ಹಕ್ಕಿರಲಿಲ್ಲ ಎಂದು ನುಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಹೋರಾಟ ನಡೆಸುವ ಮೂಲಕ ಮಹಿಳೆಯರಿಗೂ ಹಾಗೂ ದೇಶದ ಕಟ್ಟ ಕಡೆಯ ಮನುಷ್ಯನಿಂದ ಶ್ರೀಮಂತರವರೆಗೂ ಮತದಾನದ ಹಕ್ಕು ಹಾಗೂ ರಾಜಕೀಯ ಅಧಿಕಾರವನ್ನು ಕಲ್ಪಿಸಿರುವುದು ಅಂಬೇಡ್ಕರ್ ಅವರ ಹೋರಾಟದಿಂದ ಬಂದ ಬಳುವಳಿ ಎಂದ ಅವರು, ಪ್ರಪಂಚದಲ್ಲಿ 330 ಕೋಟಿ ದೇವರಿದ್ದಾರೆ ಎಂಬ ಪ್ರತೀತಿ ಇದೆ. ಆ ದೇವರುಗಳನ್ನು ಬಾರತದ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿದರೆ ಒಬ್ಬ ವ್ಯಕ್ತಿಗೆ ಮೂರು ದೇವರಂತೆ ಹಂಚಿಕೆ ಮಾಡಬಹುದು. ಆದರೆ ಅದೇ ದೇವರನ್ನು ಕಾಯಲು ಸಂವಿಧಾನದಡಿಯಲ್ಲಿರುವ ಪೊಲೀಸರೇ ಬೇಕು. ಸಿ.ಸಿ.ಟಿವಿ ಕ್ಯಾಮೆರಾಗಳು ಬೇಕು. ಇಲ್ಲವಾದರೆ, ವೇದ ಪುರಾಣಗಳನ್ನೊಂದಿದ ದೇವರುಗಳು ಕಳ್ಳರ ಪಾಲಾಗುತ್ತವೆ ಎಂದು ನುಡಿದರು.

ವೇದ ಪುರಾಣ, ಉಪನಿಷತ್ತು ಜಾತಕ, ಪಂಚಾಂಗ ಇವುಗಳೆಲ್ಲವೂ ಸುಳ್ಳು. ಇವುಗಳನ್ನು ಬಳಸಿಕೊಂಡು ಆಡಳಿತ ನಡೆಸಲು ಸಾಧ್ಯವಿಲ್ಲ. ದಲಿತರೆಲ್ಲಾ ಒಂದಾಗುವ ಕಾಲ ಬಂದಿದೆ. ಹಿಂದಿನ ಕಾಲದಿಂದಲೂ ದಲಿತವರ್ಗ ಜೋಳಿಗೆ ತೋರಿಸಿ ಪಡಿ ಕೇಳುವ ಸಂಪ್ರದಾಯ ಇಂದೂ ಕೂಡ ಮುಂದುವರಿದಿದೆ. ಅಂದು ಹೊಟ್ಟೆಪಾಡಿಗಾಗಿ ಅಕ್ಕಿ ಸಾಮಾನು ಕೇಳಿದರೆ ಇಂದು ಸಿ.ಎಂ.ಸ್ಥಾನವನ್ನು ಅದೇ ಜೋಳಿಗೆ ಮೂಲಕ ಬೇಡುವ ಪರಿಸ್ಥಿತಿ ದಲಿತರದ್ದಾಗಿದೆ. ರಾಜ್ಯದ ಎಲ್ಲಾ ದಲಿತ ವರ್ಗ ಒಂದುಗೂಡದೆ ಹೋದರೆ ರಾಜ್ಯದ ಸಿಎಂ ಹುದ್ದೆಯೂ ಸಿಗಲಾರದು. ಹಣ, ಹೆಂಡ, ಬಿರಿಯಾನಿ ಎಲ್ಲವನ್ನೂ ತಿರಸ್ಕರಿಸಿ ಒಂದಾಗಿ ಮತ ಚಲಾಯಿಸಿದರೆ ಸಿಎಂ ಸ್ಥಾನ ದಲಿತ ವರ್ಗದ ಕಡೆಗೆ ತಾನಾಗಿಯೇ ಒಲಿದುಬರಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಛಲವಾದಿ ಮಹಾಸಬಾ ರಾಜ್ಯಾಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಕೆ.ಶಿವರಾಮ್ ಮಾತನಾಡಿ, ಐವತ್ತು ವರ್ಷ ಆಡಳಿತ ನಡೆಸಿದ ಇಂದಿರಾಗಾಂಧಿಯವರ ಪಕ್ಷ ದಲಿತರನ್ನು ತುಳಿಯುತ್ತಲೇ ಬಂದಿದೆ. ಲೋಕಸಬೆಯಲ್ಲಿ ವಿರೋಧಪಕ್ಷಕ್ಕಾಗುವಷ್ಟು ಸದಸ್ಯರಿದ್ದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿರೋಧ ಪಕ್ಷದ ಸ್ಥಾನವನ್ನು ದಲಿತರೆನ್ನುವ ಕಾರಣಕ್ಕೆ ಕೊಡುತ್ತಿರಲಿಲ್ಲ ಎಂದು ಹೇಳಿದರು.

ಆ ಪಕ್ಷ ದಲಿತರ ಪರ ಇರುವುದಾದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಆಂಜನೇಯ, ಡಾ.ಎಚ್.ಸಿ.ಮಹದೇವಪ್ಪ ಇವರಲ್ಲಿ ಯಾರಾದರೂ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ನಂ.1ಸ್ಥಾನ ಹೊಂದಿರುವ ದಲಿತವರ್ಗ 1.8 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೂ ಈ ಸಮುದಾಯ ತುಳಿತಕ್ಕೊಳಗಾಗಿರುವುದು ದುರಂತ. ದಲಿತವರ್ಗ ಸಿಎಂ ಹುದ್ದೆಯಂತಹ ಮಹತ್ವದ ಹುದ್ದೆಗೇರುವವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜಾರಿಯಾಗಿಲ್ಲ ಎಂಬ ಬಾವನೆ ಮೂಡುವುದರಲ್ಲಿ ಸಂದೇಹವಿಲ್ಲ ಎಂದು ನುಡಿದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಕಲಾತಂಡ ಹಾಗೂ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಪೂರ್ಣಚಂದ್ರ ತೇಜಸ್ವಿ ಕಲಾತಂಡದ ಬುದ್ಧನ ಹಾಡು ನೆರೆದಿದ್ದವರನ್ನು ರಂಜಿಸಿತು. ತಾಲೂಕು ಛಲವಾದಿ ಮಹಾಸಬಾ ಅಧ್ಯಕ್ಷ ಯು.ಆರ್.ರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರೆ. ಶಾಸಕ ಬಿ.ಬಿ.ನಿಂಗಯ್ಯ, ಎಂಎಲ್‌ಸಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು.

ಈ ಸಮಯದಲ್ಲಿ ಪಪಂ ಅಧ್ಯಕ್ಷೆ ಪಾರ್ವತಮ್ಮ, ಜಿಪಂ ಸದಸ್ಯರಾದ ಶಾಮಣ್ಣ, ನಿಖಿಲ್ ಚಕ್ರವರ್ತಿ, ಮುಖಂಡರಾದ ನಾಗರತ್ನ, ಕಾಳಯ್ಯ, ಜಾಕೀರ್ ಹುಸೇನ್, ಲೋಕವಳ್ಳಿ ರಮೇಶ್, ಎಂ.ಎಸ್.ಕೃಷ್ಣ, ಹೆಸಗಲ್ ಗಿರೀಶ್, ವಕೀಲ ಚಂದ್ರು, ಬಿ.ಆರ್.ಸುಬ್ಬಯ್ಯ, ರವೂಪ್‌ಖಾನ್, ಎಂ.ಎಸ್.ಅಶೋಕ್, ಡಾ.ಡಿ.ಆರ್.ಪ್ರೇವ್ಕುಮಾರ್, ಛಲವಾದಿ ಮಹಾಸಬಾ ಜಿಲ್ಲಾಧ್ಯಕ್ಷ ಚಂದ್ರು, ಬೆಂಗಳೂರಿನ ಗುತ್ತಿಗೆದಾರ ಮಂಜುನಾಥ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News