ಪವಾಡ ಸದೃಶವಾಗಿ ಪಾರಾಯಿತು ಕಾರಿನಲ್ಲಿದ್ದ ಕುಟುಂಬ

Update: 2016-05-06 11:49 GMT

ಪುತ್ತೂರು, ಮೇ 6: ಕಾರು ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿ ಸೇತುವೆಯ ಮೇಲೆ ಸಿಲುಕಿಕೊಂಡ ಕಾರು ಚಾಲಕ ಮತ್ತು ಇತರ ನಾಲ್ವರು ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಶುಕ್ರವಾರ ಮಧ್ಯಾಹ್ನ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಒಳಮೊಗ್ರು ಗ್ರಾಮದ ಕುಂಬ್ರ ಸೇತುವೆಯ ಬಳಿ ನಡೆದಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ಮರಳು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಸೇತುವೆಯ ಮೇಲೆ ಚಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮುಂದಕ್ಕೆ ಚಲಿಸುತ್ತಿದ್ದ ಮರಳಿನ ಲಾರಿ ಸೇತುವೆಗೆ ಅಡ್ಡವಾಗಿ ತಿರುಗಿದೆ.

ಇದೇ ಸಂದರ್ದಲ್ಲಿ ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಎರಡು ಲಾರಿಗಳ ನಡುವೆ ಸಿಲುಕಿದೆ. ಲಾರಿಗಳು ಪರಸ್ಪರ ಡಿಕ್ಕಿ ಹೊಡೆಯುವ ಸಂದರ್ಭ ಮಧ್ಯದಲ್ಲಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ಕಾರು ಒಂದು ಬದಿಗೆ ಎಸೆಯಲ್ಪಟ್ಟು ಸೇತುವೆಯ ಮುರಿದು ಬಿದ್ದಿರುವ ಕಂಬದಲ್ಲಿ ಸಿಲುಕಿಕೊಂಡಿದೆ.

ಕಾರಿನಲ್ಲಿ ಚಾಲಕ ಸಹಿತ ಐವರು ಪ್ರಯಾಣಿಕರಿದ್ದರು. ಇವರು ಮಡಿಕೇರಿ ಸಮೀಪದ ನಾಪೋಕ್ಲುವಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅಪಘಾತ ಸಂದರ್ಭದಲ್ಲಿ ಕಾರು ಸೇತುವೆಯ ಬದುವಿನಲ್ಲಿ ಸಿಲುಕಿಕೊಳ್ಳದಿದ್ದಲ್ಲಿ ಸುಮಾರು 20 ಅಡಿಯ ಆಳಕ್ಕೆ ಬಿದ್ದು ಭಾರೀ ಅನಾಹುತ ಸಂವಿಸಿ ಜೀವಹಾನಿಯಾಗುವ ಅಪಾಯವಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅಗಲ ಕಿರಿದಾಗಿರುವ ಈ ಸೇತುವೆಯಲ್ಲಿ ಕಳೆದ ವರ್ಷ ಹತ್ತಕ್ಕೂ ಮಿಕ್ಕಿದ ಅಪಘಾತಗಳು ನಡೆದು ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತಿರುವಿನಿಂದ ಕೂಡಿದ ರಸ್ತೆಯಲ್ಲಿ ಈ ಸೇತುವೆ ಇರುವ ಕಾರಣ ಎರಡು ವಾಹನಗಳು ಏಕಕಾಲದಲ್ಲಿ ಸೇತುವೆಯ ಮೇಲೆ ಚಲಿಸಿದರೆ ಇಲ್ಲಿ ಅಪಘಾತ ಸಂಭವಿಸುತ್ತಲೇ ಇರುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News