ರಂಗಭೂಮಿಯಿಂದ ದೂರವಾಗುತ್ತಿರುವ ಚಲನಚಿತ್ರ ಕ್ಷೇತ್ರ: ನಾಗತಿಹಳ್ಳಿ ಚಂದ್ರಶೇಖರ್

Update: 2016-05-06 12:39 GMT

ಮಂಗಳೂರು, ಮೇ 6: ಪ್ರಸಕ್ತ ದಿನಗಳಲ್ಲಿ ಚಲನಚಿತ್ರ ಕ್ಷೇತ್ರವು ರಂಗಭೂಮಿಯಿಂದ ತುಂಬಾ ದೂರಕ್ಕೆ ಸಾಗುತ್ತಿದೆ ಎಂದು ಹಿರಿಯ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ‘ರಂಗಸಂಗಾತಿ’ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಂಗಭೂಮಿಯಲ್ಲಿ ಪಳಗಿದವರು ಯಾವತ್ತೂ ಸೋಲುವುದಿಲ್ಲ. ಅವರು ಶಿಸ್ತುಬದ್ಧರಾಗಿರುತ್ತಾರೆ. ಆದರೆ ಚಲನಚಿತ್ರ ಕ್ಷೇತ್ರವು ರಂಗಭೂಮಿಯಿಂದ ದೂರ ಸಾಗುತ್ತಿದೆ ಎಂದರು. ರಂಗಭೂಮಿಗೆ ಹೆಚ್ಚಿನ ಒತ್ತು ನೀಡಬೇಕು. ನನಗೆ ಅಪಾರ ನಂಬಿಕೆ ಇರುವುದೇ ರಂಗಭೂಮಿಯ ಮೇಲೆ ಎಂದು ರಂಗಭೂಮಿಯ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಎರಡು ವರ್ಷಗಳ ನಂತರ ತಾವು ನಿರ್ದೇಶಿಸುತ್ತಿರುವ ‘ಇಷ್ಟಕಾಮ್ಯ’ ಚಿತ್ರದ ಬಗ್ಗೆ ಮಾತನಾಡಿದ ಅವರು, ಮೇ 13 ರಂದು ರಾಜ್ಯಾದ್ಯಂತ ಸುಮಾರು 100 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಅಮೆರಿಕಾ, ಇಂಗ್ಲೆಂಡ್, ಪ್ಯಾರಿಸ್‌ನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು.ವೆಂಕಟ ಗಿರಿ ರಾವ್ ಅವರ ಕಾದಂಬರಿ ಆಧಾರಿತ ಚಲನಚಿತ್ರ ಇದಾಗಿದೆ. ಕುವೆಂಪು ಅವರ ‘ಜೇನಾಗುವ’ ಕವಿತೆಯನ್ನು ಹಾಡಾಗಿ ಪರಿವರ್ತಿಸಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‘ಕವಿಶೈಲ’ದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹೊಸತನಕ್ಕೆ ಗಮನ ನೀಡಲಾಗಿದೆ ಎಂದರು. ‘ಅಗ್ನಿಸಾಕ್ಷಿ’ ಧಾರಾವಾಹಿಯ ನಾಯಕ ನಟ ವಿಜಯ್ ಸೂರ್ಯ ಚಿತ್ರದ ನಾಯಕ ಪಾತ್ರವನ್ನು ನಿರ್ವಹಿಸಿದ್ದು, ಕುಂದಾಪುರದ ಕಾವ್ಯ ಹಾಗೂ ಮಯೂರಿ ಪ್ರಧಾನ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ದಾರೆ. ರಂಗಾಯಣ ರಘು, ಚಿಕ್ಕಣ್ಣ, ಬಿ. ಜಯಶ್ರೀ, ಪ್ರಕಾಶ್ ಬೆಳವಾಡಿ ಮುಂತಾದವರು ಪ್ರಧಾನ ಪಾತ್ರದಲ್ಲಿದ್ದಾರೆ. ಸಹ್ಯಾದ್ರಿಯ ತಪ್ಪಲು, ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದರು.

ಪ್ರೀತಿ, ಪ್ರೇಮದಿಂದಾಚೆಗಿನ ಭಾರತೀಯ ಸಂಸ್ಕೃತಿಯ ಸ್ಥಿತ್ಯಂತರ ಈ ಚಿತ್ರದ ಪ್ರಮುಖ ಅಂಶವಾಗಿದ್ದು, ಯಾರೂ ನೋಡಿರದಂತಹ ಅನಾಮಿಕ ಸ್ಥಳಗಳಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News