×
Ad

ವ್ಯವಹಾರ ಆರಂಭಿಸಿದ ದಿನವೇ ಮುಚ್ಚಿದ ವೈನ್‌ಶಾಪ್!

Update: 2016-05-06 17:57 IST

ಪುತ್ತೂರು, ಮೇ 6: ಪುತ್ತೂರು ತಾಲೂಕಿನ ಗಡಿ ಪ್ರದೇಶವಾದ ನೆಟ್ಟಣಿಗೆ ಮುಡ್ನೂರು ಗ್ರಾಮದ ಓಣಿಯಡ್ಕ ಎಂಬಲ್ಲಿ ವ್ಯಾಪಾರ ಆರಂಭಿಸಿದ ವೈನ್‌ಶಾಪ್‌ಗೆ ಗ್ರಾಮಸ್ಥರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ಆಗಮಿಸಿ ಬೀಗ ಜಡಿದು ಸೀಲು ಹಾಕಿದ್ದಾರೆ.

ದಲಿತ ಕಾಲನಿಯ ಮಧ್ಯೆ ಇರುವ ಓಣಿಯಡ್ಕ ಎಂಬಲ್ಲಿ ಸರಕಾರಿ ಪ್ರೌಢ ಶಾಲೆ, ಮಸೀದಿ, ಸಾರ್ವಜನಿಕ ಬಸ್ ತಂಗುದಾಣವಿರುವ ಪ್ರದೇಶದಲ್ಲಿ ಪಂಚಾಯತ್ ಸದಸ್ಯರ ಹಾಗೂ ವಿವಿಧ ಸಂಘ ಸಂಸ್ಥೆಗಳ ವಿರೋಧದ ನಡುವೆಯೇ ವೈನ್‌ಶಾಪ್ ತೆರೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಕಳೆದ ಮಾರ್ಚ್ 26ರಂದು ಓಣಿಯಡ್ಕದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ವೈನ್‌ಶಾಪ್ ತೆರೆಯಲೆಂದು ತಂದು ದಾಸ್ತಾನಿರಿಸಿದ್ದ ಮದ್ಯವನ್ನು ಅಲ್ಲಿಂದ ತೆರವುಗೊಳಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು.

ಓಣಿಯಡ್ಕದಲ್ಲಿ ವೈನ್‌ಶಾಪ್ ತೆರೆಯುವುದಕ್ಕೆ ಓಣಿಯಡ್ಕ ಪರಿಶಿಷ್ಟ ಜಾತಿ ಕಾಲನಿ ಮತ್ತು ಮಡ್ಯಲಮಜಲು ಪರಿಶಿಷ್ಟ ಜಾತಿಯ ಕಾಲನಿ, ಸರಕಾರಿ ಪ್ರೌಢ ಶಾಲೆ, ಮಸೀದಿ ವತಿಯಿಂದ ಸಂಬಂಧಪಟ್ಟವರಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಸ್ಥಳೀಯ ಜನಪ್ರತಿನಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಒಡಿಯೂರು ಗುರುಸೇವಾ ಬಳಗದ ಸ್ವಸಹಾಯ ಸಂಘದ ವತಿಯಿಂದಲೂ ವಿರೋಧ ವ್ಯಕ್ತವಾಗಿತ್ತು. ಈ ಪ್ರದೇಶ ಬಿಟ್ಟು ಬೇರೆ ಕಡೆ ವೈನ್‌ಶಾಪ್ ತೆರೆಯುವಂತೆ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲೂ ನಿರ್ಣಯವಾಗಿತ್ತು. ಹೀಗಿದ್ದರೂ ಲೋಕೋಪಯೋಗಿ ಇಲಾಖೆಗೆ ಸೇರಿದ ಈಶ್ವರಮಂಗಲ -ಪಳ್ಳತ್ತೂರು ಅಂತರ್ ರಾಜ್ಯ ಸಂಪರ್ಕ ರಸ್ತೆ ಮಾರ್ಜಿನ್‌ನಲ್ಲಿರುವ ಹಾಗೂ ಸಾರ್ವಜನಿಕ ಬಸ್ ತಂಗುದಾಣದ ಬಳಿಯಿರುವ ಕಟ್ಟಡದಲ್ಲಿ ಪಂಚಾಯತ್ ಅನುಮತಿ ಪಡೆಯದೆ ವೈನ್‌ಶಾಪ್ ತೆರೆಯುವ ಪ್ರಯತ್ನ ನಡೆದಿತ್ತು.

ಅಬಕಾರಿ ಇಲಾಖೆಯಿಂದ ಪಂಜೋಡಿಯಲ್ಲಿ ವೈನ್‌ಶಾಪ್ ತೆರೆಯುವ ಅನುಮತಿಯನ್ನು ಪಡೆದುಕೊಂಡು ಓಣಿಯಡ್ಕ ಎಂಬಲ್ಲಿರುವ ಪರಿಶಿಷ್ಟ ಜಾತಿಯ ಕಾಲಯಲ್ಲಿ ಪಂಚಾಯತ್ ಅನುಮತಿ ಪಡೆಯದ ಕಟ್ಟಡದಲ್ಲಿ ವೈನ್‌ಶಾಪ್ ತೆರೆಯುವ ಕೆಲಸ ನಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರೂ ಬಂದ್ ಮಾಡಿಸುವ ಕೆಲಸ ನಡೆದಿಲ್ಲ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಇಲಾಖೆಯವರು ಸೂಕ್ತ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರೇ ಕಾನೂನನ್ನು ಕೈಗೆತ್ತಿಕೊಳ್ಳಬೇಕಾದ ಪ್ರಮೇಯ ಬರುತ್ತದೆ. ಯಾವುದೇ ಕಾರಣಕ್ಕೂ ಓಣಿಯಡ್ಕದಲ್ಲಿ ವೈನ್‌ಶಾಪ್ ತೆರೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಆದರೆ ಇಲಾಖೆಯ ಅಧಿಕಾರಿಗಳು ಗುರುವಾರ ಸಂಜೆಯ ವೇಳೆಗೆ ಆಗಮಿಸಿ ಅಂಗಡಿಗೆ ಬೀಗ ಜಡಿಯುವ ಮೂಲಕ ಗ್ರಾಮಸ್ಥರಿಂದ ಸೃಷ್ಠಿಯಾಗಬಹುದಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News