ಮಂಜೇಶ್ವರ: ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನಾಭರಣ, ನಗದು ವಶ
ಮಂಜೇಶ್ವರ, ಮೇ 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 2 ಕೆ.ಜಿ. ಚಿನ್ನಾಭರಣ, 2 ಲಕ್ಷ ರೂ.ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ನಿವಾಸಿ ಬೆಲ್ವಾಸಿ ಹಿಲ್ವಾರ್ (32)ಎಂಬವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕುಂಬಳೆ ಸಿಐ ಕೆ.ಅಬ್ದುಲ್ ಮುನೀರ್, ಮಂಜೇಶ್ವರ ಎಸ್ಸೈ ಪಿ. ಪ್ರಮೋದ್ ನೇತೃತ್ವದ ಪೊಲೀಸ್ ತಂಡ ಗುರುವಾರ ರಾತ್ರಿ ತಲಪಾಡಿಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಮಂಗಳೂರಿನಿಂದ ಕಾಸರಗೋಡಿನತ್ತ ಬರುತ್ತಿದ್ದ ಬಸ್ಸಿನಲ್ಲಿ ಅನಧಿಕೃತವಾದ ನಗದು ಹಾಗೂ ಚಿನ್ನಾಭರಣ ಪತ್ತೆಹಚ್ಚಲಾಯಿತು.ಆರೋಪಿಯನ್ನು ವಶಕ್ಕೆ ತೆಗೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಇದೇ ವೇಳೆ ಮತ್ತೆ ರಾತ್ರಿ 8ರ ಸುಮಾರಿಗೆ ಮಂಗಳೂರಿನಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ಮತ್ತೊಂದು ಬಸ್ಸಿನಲ್ಲಿ 1,706 ಗ್ರಾಂ ಚಿನ್ನ ಪತ್ತೆಯಾಗಿದೆ.ಚಿನ್ನಾಭರಣವನ್ನೊಳಗೊಂಡ ಸೂಟ್‌ಕೇಸ್ ಬಸ್ಸಿನ ಹಿಂಬದಿಯ ಆಸನದಡಿ ಪತ್ತೆಯಾಗಿದೆ.ಆದರೆ ವಾರಸುದಾರರನ್ನು ಪತ್ತೆಹಚ್ಚಲಾಗಿಲ್ಲ.
ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ವಿತರಿಸಲು ಅವ್ಯಾಹತವಾಗಿ ಕಾಳಧನ ಬಳಕೆಯಾಗುತ್ತಿದೆಯೆಂಬ ವದಂತಿಯ ಬೆನ್ನಲ್ಲಿ ಇದೀಗ ಕಳೆದೊಂದು ವಾರದಿಂದ ಬಿಗಿಗೊಳಿಸಲಾದ ತಪಾಸಣೆಯಲ್ಲಿ ಕೋಟ್ಯಂತರ ರೂ. ನಗ-ನಗದನ್ನು ವಶಪಡಿಸಿರುವುದು ಮತದಾನವನ್ನು ಬುಡಮೇಲುಗೊಳಿಸುವ ಯತ್ನವೆಂದು ತಿಳಿಯಲಾಗಿದೆ.